ಜಿಎಸ್‌ಟಿಯ ಶೇ.12, 18 ತೆರಿಗೆ ಶ್ರೇಣಿ ವಿಲೀನ: ಜೇಟ್ಲಿ ವಿಶ್ವಾಸ

Update: 2019-07-01 14:46 GMT

ಹೊಸದಿಲ್ಲಿ, ಜು.1: ಆದಾಯ ಹೆಚ್ಚಿದಂತೆ ಮುಂದಿನ ದಿನಗಳಲ್ಲಿ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ)ಯ ಶೇ.12 ಮತ್ತು ಶೇ.18ರ ತೆರಿಗೆ ಶ್ರೇಣಿಯನ್ನು ವಿಲೀನಗೊಳಿಸಿ ಜಿಎಸ್‌ಟಿಯನ್ನು ಎರಡು ಹಂತದ ತೆರಿಗೆ ಪದ್ಧತಿಯಾಗಿ ರೂಪಿಸಬಹುದು ಎಂದು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಜಿಎಸ್‌ಟಿ ಜಾರಿಯಾಗಿ ಎರಡು ವರ್ಷಗಳಾದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಲೇಖನವೊಂದನ್ನು ಬರೆದಿರುವ ಜೇಟ್ಲಿ, 20 ರಾಜ್ಯಗಳು ಈಗಾಗಲೇ ಶೇ.14ರಷ್ಟು ಹೆಚ್ಚುವರಿ ಆದಾಯ ದಾಖಲಿಸಿದ್ದು ಜಿಎಸ್‌ಟಿ ಅನುಷ್ಟಾನದಿಂದ ಆಗಿರುವ ನಷ್ಟ ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಬೇಕಿಲ್ಲ ಎಂದು ಜೇಟ್ಲಿ ಹೇಳಿದರು.

ಐಷಾರಾಮಿ ಮತ್ತು ಹಾನಿಕಾರಕ ವಸ್ತುಗಳನ್ನು (ಮದ್ಯ, ತಂಬಾಕು ಇತ್ಯಾದಿ) ಹೊರತುಪಡಿಸಿ ಶೇ.28ರ ತೆರಿಗೆ ಶ್ರೇಣಿ ಬಹುತೇಕ ಹಂತ ಹಂತವಾಗಿ ರದ್ದಾಗಿದೆ. ಶೂನ್ಯ ಮತ್ತು ಶೇ.5ರ ಶ್ರೇಣಿ ಯಾವತ್ತೂ ಉಳಿಯಲಿದೆ. ವರಮಾನ ಹೆಚ್ಚಿದರೆ ಆಗ ಶೇ.12 ಮತ್ತು 18ರ ತೆರಿಗೆ ಶ್ರೇಣಿಯ ವಿಲೀನಕ್ಕೆ ಅವಕಾಶವಾಗುತ್ತದೆ. ಆಗ ಜಿಎಸ್‌ಟಿ ಎರಡು ಹಂತದ ರೂಪ ಪಡೆದು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ ಎಂದವರು ಹೇಳಿದರು. ಆದರೆ ಒಮ್ಮೆಗೇ ವಿಲೀನ ಪ್ರಕ್ರಿಯೆಗೆ ಮುಂದಾದರೆ ಸರಕಾರಗಳ ವರಮಾನದಲ್ಲಿ ಭಾರೀ ನಷ್ಟವಾಗುತ್ತದೆ. ಆದ್ದರಿಂದ ವರಮಾನ ಹೆಚ್ಚಿದ ಬಳಿಕ ಹಂತಹಂತವಾಗಿ ಮಾಡಬೇಕಿದೆ . ಆರಂಭದ ಐದು ವರ್ಷ ಶೇ.14ರಷ್ಟು ಏರಿಕೆ ಖಾತರಿಪಡಿಸಲಾಗಿದೆ. ಆದರೆ ಆ ಬಳಿಕ ಏನಾಗಲಿದೆ ಎಂಬುದು ಈಗ ರಾಜ್ಯಗಳಿಗಿರುವ ಹೆದರಿಕೆ. ಅಗತ್ಯಬಿದ್ದರೆ, ಪರಿಹಾರ ನಿಧಿಯಿಂದ ಎಲ್ಲಾ ರಾಜ್ಯಗಳಿಗೆ ಅದರ ಪಾಲನ್ನು ನೀಡಲಾಗುತ್ತದೆ. ಈಗ ಎರಡು ವರ್ಷವಾಗಿದೆ ಅಷ್ಟೇ. ಈಗಲೇ 20 ರಾಜ್ಯಗಳ ಆದಾಯದಲ್ಲಿ ಶೇ.14ಕ್ಕೂ ಅಧಿಕ ಹೆಚ್ಚಳ ದಾಖಲಾಗಿದೆ ಎಂದು ಜೇಟ್ಲಿ ಹೇಳಿದರು.

ಏಕಶ್ರೇಣಿಯ ಜಿಎಸ್‌ಟಿ ವ್ಯವಸ್ಥೆ ಶ್ರೀಮಂತ ರಾಷ್ಟ್ರಗಳಲ್ಲಿ ಮಾತ್ರ ಸಾಧ್ಯ. ಹೆಚ್ಚಿನ ಪ್ರಜೆಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ರಾಷ್ಟ್ರಗಳಲ್ಲಿ ಇಂತಹ ವ್ಯವಸ್ಥೆ ಜಾರಿಗೊಳಿಸುವುದು ನ್ಯಾಯಸಮ್ಮತವಲ್ಲ. ಜಿಎಸ್‌ಟಿ ಜಾರಿಗೆ ಮುನ್ನ, ಶ್ರೀಮಂತರು ಹಾಗೂ ಬಡವರು ವಿವಿಧ ವಸ್ತುಗಳಿಗೆ ಏಕರೀತಿಯ ತೆರಿಗೆ ಪಾವತಿಸುತ್ತಿದ್ದರು. ಬಹು ವಿಧದ ತೆರಿಗೆ ವ್ಯವಸ್ಥೆಯಿಂದ ಹಣದುಬ್ಬರಕ್ಕೆ ತಡೆಯಾಗಿರುವ ಜೊತೆಗೆ, ಜನಸಾಮಾನ್ಯರ ಬಳಕೆಯ ವಸ್ತುಗಳಿಗೆ ಅತಿಯಾದ ತೆರಿಗೆ ಹಾಕುವುದನ್ನು ತಪ್ಪಿಸಲಾಗಿದೆ. ಹವಾಯ್ ಚಪ್ಪಲಿ ಹಾಗೂ ಮರ್ಸಿಡೆಸ್ ಕಾರಿಗೆ ಒಂದೇ ರೀತಿಯ ತೆರಿಗೆ ವಿಧಿಸಲು ಸಾಧ್ಯವಿಲ್ಲ. ಇದರರ್ಥ ತೆರಿಗೆ ಶ್ರೇಣಿಗಳನ್ನು ತರ್ಕಬದ್ಧಗೊಳಿಸುವ ಅಗತ್ಯವಿಲ್ಲ ಎಂದಲ್ಲ. ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News