ಖಾಸಗಿ ಶಾಲೆಗಳಲ್ಲಿ ದುರ್ಬಲ ವರ್ಗಗಳ ಶೇ.25ರಷ್ಟು ಮಕ್ಕಳ ಪ್ರವೇಶಾತಿ ಕಡ್ಡಾಯ

Update: 2019-07-01 15:25 GMT

ಹೊಸದಿಲ್ಲಿ,ಜು.1: ಎಲ್ಲಾ ಖಾಸಗಿ ಹಾಗೂ ವಿಶೇಷ ಶ್ರೇಣಿಯ ಶಾಲೆಗಳು ಒಂದನೇ ತರಗತಿ ಅಥವಾ ಅದಕ್ಕಿಂತ ಕೆಳಗಿನ ತರಗತಿಗಳಿಗೆ ಕನಿಷ್ಠ ಶೇ.25ರಷ್ಟು ದುರ್ಬಲ ವರ್ಗಗಳು ಹಾಗೂ ಅವಕಾಶವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪ್ರವೇಶಾತಿ ನೀಡಬೇಕೆಂದು ಕೇಂದ್ರ ಮಾನವಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಸೋಮವಾರ ಲೋಕಸಭೆಗೆ ತಿಳಿಸಿ ದ್ದಾರೆ.

 ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯು 2010ರ ಎಪ್ರಿಲ್ 1ರಿಂದ ಜಾರಿಗೆ ಬಂದಿದೆ ಹಾಗೂ ಈ ಕಾಯ್ದೆಯು 6ರಿಂದ 14 ವರ್ಷ ವಯಸ್ಸಿನೊಳಗಿನ ಎಲ್ಲಾ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಅವರ ಮೂಲಭೂತ ಹಕ್ಕನ್ನಾಗಿ ಮಾಡಿದೆ ಎಂದು ಸಚಿವರು ತಿಳಿಸಿದರು.

ಶಿಕ್ಷಣದ ಹಕ್ಕು ಕಾಯ್ದೆಯ ಸೆಕ್ಷನ್ 12(1)(ಸಿ)ರಲ್ಲಿ ಅಧಿಸೂಚಿತವಾಗಿರುವ ನಿಯಮದ ಪ್ರಕಾರ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಶಾಲೆಗಳಿಗೆ ತಗಲುವ ವೆಚ್ಚವನ್ನು ಸರಕಾರವು ಮರುಪಾವತಿಸಲು ಆರ್‌ಟಿಇ ಕಾಯ್ದೆಯ ಸೆಕ್ಷನ್ 12(2)ರಲ್ಲಿ ಅವಕಾಶ ನೀಡಲಾಗಿದೆಯೆಂದು ಅವರು ಹೇಳಿದರು.

ಆರ್‌ಟಿಇ ಕಾಯ್ದೆಯಡಿ ಪ್ರತಿ ಮಗುವಿನ ಶಿಕ್ಷಣಕ್ಕೆ ಶಾಲೆಗಳಿಗೆ ತಗಲುವ ವೆಚ್ಚವನ್ನು ಅಥವಾ ಮಗುವಿಗೆ ಅವು ವಿಧಿಸುವ ನೈಜ ಶುಲ್ಕದ ಮೊತ್ತ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ರಾಜ್ಯ ಸರಕಾರ ಭರಿಸಲಿದೆ.

ಆರ್‌ಟಿಇ ಕಾಯ್ದೆಯಡಿ ಶಿಕ್ಷಣ ಪಡೆಯಲು ಅವಕಾಶವಿರುವ ಬಹುತೇಕ ಶಾಲೆಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ನಿಯಂತ್ರಣದಲ್ಲಿದೆಯೆಂದು ಪೋಖ್ರಿಯಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News