ದ.ಕ. ಜಿ.ಪಂ.ಅಧ್ಯಕ್ಷೆಯಿಂದ ವೈದ್ಯಾಧಿಕಾರಿ ಮೇಲಿನ ದುರ್ವರ್ತನೆ ಆರೋಪ: ಕ್ಷಮೆಯಾಚನೆಗೆ ಐಎಂಎ ಆಗ್ರಹ

Update: 2019-07-02 11:02 GMT

ಮಂಗಳೂರು, ಜು.2: ಕರ್ತವ್ಯ ನಿರತರಾಗಿದ್ದ ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮೇಲೆ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಅಸಭ್ಯವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಷಮೆಯಾಚಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ಅಧ್ಯಕ್ಷರಾದ ಡಾ. ಸಚ್ಚಿದಾನಂದ ರೈ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ಅವರು, ಜಿ.ಪಂ. ಅಧ್ಯಕ್ಷೆಯವರು ವೈದ್ಯಾಧಿಕಾರಿ ಡಾ. ಅರ್ಚನಾ ಕರಿಕಳ ಅವರನ್ನು ಅವಾಚ್ಯವಾಗಿ ನಿಂದಿಸುವ ಸಂದರ್ಭ ವೈದ್ಯರಿಗೆ ಕಾಮನ್ಸ್‌ಸೆನ್ಸ್ ಇಲ್ಲ ಎಂಬ ಪದ ಬಳಕೆ ಮಾಡಿದ್ದಾರೆ. ಅದನ್ನು ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೂ ದೂರು ನೀಡಲಾಗಿದೆ. ಐಎಂಎ ವತಿಯಿಂದ ಜಿ.ಪಂ. ಅಧ್ಯಕ್ಷೆ ಜತೆಗೂ ಮಾತುಕತೆ ನಡೆಸಲಾಗಿದೆ. ಪುತ್ತೂರು ಶಾಸಕರ ಸಮ್ಮುಖದಲ್ಲಿ ತಾವು ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ ಎಂದವರು ಹೇಳಿದರು.

ವೈದ್ಯರ ಮೇಲೆ ಈ ರೀತಿಯ ವರ್ತನೆ, ದುರ್ನಡತೆ, ವ್ಯಂಗ್ಯ ಇದೇ ಮೊದಲಲ್ಲ. ಜಿಲ್ಲಾ ಮಟ್ಟದ ವೆನ್‌ಲಾಕ್ ಆಸ್ಪತ್ರೆಯಲ್ಲಿಯೂ ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಶೇ. 50ರಷ್ಟು ವೆದ್ಯರ ಕೊರತೆಯಿಂದ್ದರೂ ವೆನ್‌ಲಾಕ್ ಆಸ್ಪತ್ರೆಯಲ್ಲಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ರೋಗಿಯೊಬ್ಬ ಆಸ್ಪತ್ರೆಗೆ ದಾಖಲಾದ ಸಂದರ್ಭ ಆತನ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಚಿಕಿತ್ಸೆ ಒದಗಿಸಬೇಕಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಸಿಟಿ ಸ್ಕಾನ್‌ನಂತಹ ಚಿಕಿತ್ಸೆಗಳು ಅಗತ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿ ತಡವಾಗುತ್ತದೆ. ಆದರೆ ಅದನ್ನೇ ಮುಂದಿಟ್ಟುಕೊಂಡು ಚಿಕಿತ್ಸೆ ಒದಗಿಸಿಲ್ಲ ಎಂಬ ನೆಪದಲ್ಲಿ ವೈದ್ಯರ ನಿಂದನೆ, ಹಲ್ಲೆ ತಪ್ಪು ಬೆಳವಣಿಗೆ. ಇದು ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧವನ್ನು ಕೆಡಿಸುತ್ತದೆ ಎಂದು ವೆನ್‌ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಹೇಳಿದರು.

ಡಾ.ಅರ್ಚನಾ ಅವರು ಅದೆಷ್ಟೋ ರೋಗಿಗಳಿಗೆ ತಮ್ಮ ಕೈಯಿಂದ ಹಣ ಖರ್ಚು ಮಾಡಿ ಚಿಕಿತ್ಸೆ ಒದಗಿಸಿದ್ದಾರೆ. ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಪುತ್ತೂರ ಸರಕಾರಿ ಆಸ್ಪತ್ರೆಯಲ್ಲಿ ಮಂಜೂರಾದ 15 ವೈದ್ಯರ ಹುದ್ದೆಯಲ್ಲಿ ನೇಮಕವಾಗಿರುವುದು 7 ಮಂದಿ. ಅವರಲ್ಲಿ ಓರ್ವ ವೈದ್ಯರನ್ನು ಇನ್ನೊಂದು ಆಸ್ಪತ್ರೆಗೆ ಪ್ರಭಾರಿಯನ್ನಾಗಿ ನೇಮಕ ಮಾಡಿರುವುದರಿಂದ ಅವರು ವಾರದಲ್ಲಿ ಎರಡು ದಿನ ಮಾತ್ರ ಈ ಆಸ್ಪತ್ರೆಯಲ್ಲಿರುವುದು. ಒಬ್ಬ ವೈದ್ಯರು ದೀರ್ಘಾವಧಿ ರಜೆಯಲ್ಲಿದ್ದಾರೆ. ಕರ್ತವ್ಯದಲ್ಲಿರುವುದು ಮೂರು ಮಂದಿ ಮಾತ್ರ. ದಿನಕ್ಕೆ ಅಲ್ಲಿ 450 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆಗೆ ಆಗಮಿಸುತ್ತಾರೆ. ಅವರಲ್ಲಿ ಸುಮಾರು 40 ಮಂದಿ ದಾಖಲಾಗುತ್ತಾರೆ. ಇಂತಹ ಪರಸ್ಥಿತಿಯಲ್ಲಿ ಒತ್ತಡದಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುವಂತಹ ಪರಿಸ್ಥಿತಿ ಆ ವೈದ್ಯರಿಗಿರುತ್ತದೆ. ಈ ನಡುವೆ ಈ ರೀತಿಯ ದುರ್ವತನೆ ಮಾನಸಿಕವಾಗಿ ನೋಯಿಸುತ್ತದೆ ಎಂದು ಪುತ್ತೂರು ವೈದ್ಯಾಧಿಾರಿ ಡಾ. ದೀಪಕ್ ರೈ ಬೇಸರಿಸಿದರು.

ಗೋಷ್ಠಿಯಲ್ಲಿ ಸರಕಾರಿ ವೈದ್ಯರ ಸಂಘದ ಕೋಶಾಧಿಕಾರಿ ಡಾ. ನವೀನ್ ಕುಮಾರ್ ಉಪಸ್ಥಿತರಿದ್ದರು.

ಸರಕಾರ ವೇತನ ನೀಡುತ್ತದೆ ನಿಜ. ಆದರೆ ತಮ್ಮ ಕರ್ತವ್ಯವನ್ನು ಸೇವೆಯನ್ನಾಗಿ ಪರಿಗಣಿಸಿರುವುದರಿಂದ ವೈದ್ಯರು ಸರಕಾರಿ ಸೇವೆಯನ್ನು ಆಯ್ಕೆ ಮಾಡುತ್ತಾರೆ. ನಾನೊಬ್ಬ ಸರ್ಜನ್. ತಿಂಗಳಿಗೆ ಖಾಸಗಿಯಾಗಿ 15 ಲಕ್ಷ ರೂ.ವರೆಗೆ ಸಂಪಾದಿಸಬಹುದು. ಆದರೆ ಸರಕಾರದಿಂದ ಅಷ್ಟು ವೇತನ ಸಿಗುವುದಿಲ್ಲ. ಹಾಗಿದ್ದರೂ ನಾವು ವೃತ್ತಿಯನ್ನು ಸೇವೆಯೆಂದು ಪರಿಗಣಿಸಿದ ಕಾರಣಕ್ಕೆ ಸರಕಾರಿ ವೈದ್ಯರಾಗಿ ಕೆಲಸ ಮಾಡುತ್ತಿದ್ದೇವೆ.
-ಡಾ. ಶಿವಪ್ರಕಾಶ್, ಸರ್ಜನ್, ವೆನ್‌ಲಾಕ್ ಆಸ್ಪತ್ರೆ

ಡಾ. ಅರ್ಚನಾ ಕರಿಕಳ ಅವರು ಗರ್ಭಿಣಿಯಾಗಿದ್ದು, ಈ ಘಟನೆಯಿಂದ ತೀವ್ರವಾಗಿ ಮಾನಸಿಕವಾಗಿಯೂ ಆಘಾತಕ್ಕೊಳಗಾಗಿದ್ದಾರೆ. ತಮ್ಮ ಕೆಲಸವನ್ನು ಬಿಡುವ ನಿರ್ಧಾರಕ್ಕೂ ಬಂದಿದ್ದಾರೆ. ಈಗಾಗಲೇ ವೈದ್ಯರು ಸರಕಾರಿ ಇಲಾಖೆಗಳಿಗೆ ಸೇರಲು ಹಿಂದೇಟು ಹಾಕಿದ್ದಾರೆ. ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಶೇ. 50ರಷ್ಟೂ ವೈದ್ಯರ ಕೊರತೆ ಇದೆ. ತಜ್ಞ ವೈದ್ಯರು, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಇರುವ ವ್ಯವಸ್ಥೆಯಲ್ಲಿ ಸರಕಾರಿ ವೈದ್ಯರು ಕೆಲಸ ಮಾಡುತ್ತಿರುವಾಗ ಇಂತಹ ಘಟನೆಗಳು ಪ್ರಸ್ತುತ ಸೇವೆ ನೀಡುತ್ತಿರುವ ವೈದ್ಯರನ್ನು ಹಾಗೂ ಯುವ ವೈದ್ಯರನ್ನು ಸರಕಾರಿ ಸೇವೆಯಿಂದ ವಿಮುಖರಾಗುವಂತೆ ಪ್ರೇರೇಪಿಸುತ್ತದೆ.
-ಡಾ. ಸಚ್ಚಿದಾನಂ ರೈ, ಅಧ್ಯಕ್ಷರು, ಐಎಂಎ ಮಂಗಳೂರು ಘಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News