ನೋಟ್ ಬ್ಯಾನ್ ನಂತರ ಭ್ರಷ್ಟಾಚಾರ ಹೆಚ್ಚಾಗಿದೆಯೇ?: ಹೌದೆನ್ನುತ್ತದೆ ನಿರ್ಮಲಾ ಸೀತಾರಾಮನ್ ಹೇಳಿಕೆ

Update: 2019-07-02 10:35 GMT

ಹೊಸದಿಲ್ಲಿ, ಜು.2: ಭ್ರಷ್ಟಾಚಾರವನ್ನು ಮಟ್ಟ ಹಾಕಲು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಯಶಸ್ವಿಯಾಗಿದೆ ಎಂದು ಪಕ್ಷದ ನಾಯಕರು ಏನೇ ಹೇಳಲಿ, ಲೋಕಸಭಾ ಸೆಕ್ರಟೇರಿಯಟ್ ನಿರ್ವಹಿಸುವ ನ್ಯಾಷನಲ್ ಇನ್ಫೊಮ್ಯಾಟಿಕ್ಸ್ ಸೆಂಟರ್ ಪ್ರಕಾರ ಭಾರತದಲ್ಲಿ ನೋಟ್ ಬ್ಯಾನ್ ನಂತರ ಭ್ರಷ್ಟಾಚಾರ ಮತ್ತಿತರ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿವೆ.

ಬಿಹಾರ ಸಂಸದ ರಾಮ್‍ಪ್ರೀತ್ ಮಂಡಲ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಉತ್ತರದಲ್ಲಿ, “ಅಮಾನ್ಯೀಕರಣದ ನಂತರ ವ್ಯವಸ್ಥೆಯಲ್ಲಿ ಚಲಾವಣೆಯಾಗುತ್ತಿರುವ ನಗದು ಹೆಚ್ಚಾಗಿದೆ ಹಾಗೂ ಇದಕ್ಕೂ ಅಕ್ರಮ ಚಟುವಟಿಕೆಗಳಿಗೂ ಸಂಬಂಧವಿದೆ'' ಎಂಬುದನ್ನು ಒಪ್ಪಿಕೊಂಡಿದ್ದಾರೆ.

``ನವೆಂಬರ್ 4, 2016ರಲ್ಲಿದ್ದಂತೆ ಚಲಾವಣೆಯಲ್ಲಿದ್ದ ನಗದು ರೂ 17,741 ಬಿಲಿಯನ್ ಆಗಿದ್ದರೆ, ಮಾರ್ಚ್ 29, 2019ರಲ್ಲಿದ್ದಂತೆ ಚಲಾವಣೆಯಲ್ಲಿರುವ ನಗದು ರೂ 21,137.64 ಬಿಲಿಯನ್ ಆಗಿದೆ,'' ಎಂದು ಸಚಿವಾಲಯದ ಉತ್ತರ ತಿಳಿಸಿದೆ.

``ಜಗತ್ತಿನಾದ್ಯಂತ ನಗದು ಮತ್ತು ಅಕ್ರಮ ಚಟುವಟಿಕೆಗಳಿಗೆ ಸಂಬಂಧವಿದೆ- ಟ್ರಾನ್ಸ್‍ ಫರೆನ್ಸಿ ಇಂಟರ್ ನ್ಯಾಷನಲ್ ಕಂಡುಕೊಂಡಂತೆ ಚಲಾವಣೆಯಾಗುವ ನಗದು ಹೆಚ್ಚಾದಂತೆ ಭ್ರಷ್ಟಾಚಾರವೂ ಹೆಚ್ಚಾಗುತ್ತದೆ, ಎಂದು ದಿ ಇಕನಾಮಿಕ್ ಸರ್ವೇ 2016-17ರಲ್ಲಿ ಹೇಳಲಾಗಿದೆ'' ಎಂದೂ ಈ ಉತ್ತರದಲ್ಲಿ ತಿಳಿಸಲಾಗಿದೆ.

ಟ್ರಾನ್ಸ್‍ ಫರೆನ್ಸಿ ಇಂಟರ್ ನ್ಯಾಷನಲ್ ಪ್ರಕಾರ ಭಾರತವು ಭ್ರಷ್ಟಾಚಾರದಲ್ಲಿ 180 ದೇಶಗಳ ಪೈಕಿ 78ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News