ತಮಿಳುನಾಡು: ತೇಜಸ್ ಸಮರ ವಿಮಾನದ ಇಂಧನ ಟ್ಯಾಂಕ್ ಪತನ

Update: 2019-07-02 14:54 GMT

ಚೆನ್ನೈ, ಜು. 2: ಭಾರತೀಯ ವಾಯು ಪಡೆಯ ದೇಶೀ ನಿರ್ಮಿತ ಸಮರ ವಿಮಾನ ಎಲ್‌ಸಿಎ ತೇಜಸ್ ಮಂಗಳವಾರ ತರಬೇತಿ ಹಾರಾಟ ನಡೆಸುತ್ತಿದ್ದಾಗ ಇಂಧನ ಟ್ಯಾಂಕ್ ತಮಿಳುನಾಡಿನ ಸುಲುರ್ ವಾಯು ನೆಲೆ ಸಮೀಪ ಪತನಗೊಂಡಿದೆ.

ಲಘು ಸಮರ ವಿಮಾನ ತೇಜಸ್ ಹಾರಾಟ ನಡೆಸುತ್ತಿರುವ ಸಂದರ್ಭ ಮಂಗಳವಾರ ಬೆಳಗ್ಗೆ ಸುಮಾರು 8.40ರ ಹೊತ್ತಿಗೆ ಈ ಘಟನೆ ಸಂಭವಿಸಿದೆ.

ಕೊಯಂಬತ್ತೂರು ಸಮೀಪದ ಸುಲುರ್ ವಾಯು ನೆಲೆಯಿಂದ ತೇಜಸ್ ವಿಮಾನ ಎಂದಿನಂತೆ ತರಬೇತಿ ಹಾರಾಟ ಆರಂಭಿಸಿದಾಗ ಇಂಧನ ಟ್ಯಾಂಕ್ ಕೆಳಗೆ ಬಿತ್ತು. ಈ ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಭಾರತೀಯ ವಾಯು ಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ವಾಯು ಪಡೆಗೆ ನಿಯೋಜನೆಯಾದ ಬಳಿಕ ಎಲ್‌ಸಿಎ ತೇಜಸ್ ವಿಮಾನದಿಂದ ಇಂಧನ ಟ್ಯಾಂಕ್ ಬಿದ್ದಿರುವುದು ಬಹುಶಃ ಇದೇ ಮೊದಲು. ಯುದ್ಧ ವಿಮಾನದಿಂದ ಇಂಧನ ಟ್ಯಾಂಕರ್ ಬೀಳುತ್ತಿರುವುದು ಎರಡನೇ ಘಟನೆ ಇದಾಗಿದೆ. ಕಳೆದ ವಾರ ಭಾರತೀಯ ವಾಯು ಪಡೆಯ ವಿಮಾನದಿಂದ ಇಂಧನ ಟ್ಯಾಂಕ್ ಬಿದ್ದಿತ್ತು. ಕಳೆದ ವಾರ ಅಂಬಾಲ ವಾಯು ನೆಲೆಯಿಂದ ಹಾರಾಟ ಆರಂಭಿಸಿದ ಜಾಗ್ವಾರ್ ವಿಮಾನಕ್ಕೆ ಹಕ್ಕಿ ಢಿಕ್ಕಿಯಾಗಿತ್ತು. ಇದರಿಂದ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಮಾನ ಪತನವಾಗುವುದನ್ನು ತಪ್ಪಿಸಲು ಪೈಲೆಟ್ ಇಂಧನ ಟ್ಯಾಂಕ್ ಹಾಗೂ ಅಭ್ಯಾಸಕ್ಕೆ ಬಳಸುವ ಬಾಂಬ್‌ಗಳನ್ನು ಕೆಳಗೆ ಎಸೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News