ಮೆಹುಲ್ ಚೋಕ್ಸಿ ವೈದ್ಯಕೀಯ ವರದಿ ಕೋರಿದ ಹೈಕೋರ್ಟ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸರಕಾರ

Update: 2019-07-02 15:04 GMT

ಹೊಸದಿಲ್ಲಿ, ಜು. 2: ಪಿಎನ್‌ಪಿ ವಂಚನೆ ಹಗರಣ ಸಹಿತ ಹಲವು ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಆರೋಗ್ಯ ಪ್ರಯಾಣಿಸುವ ಸ್ಥಿತಿಯಲ್ಲಿ ಇದೆಯೇ ಎಂಬುದನ್ನು ನಿರ್ಧರಿಸಲು ಮುಂಬೈಯಲ್ಲಿರುವ ಆಸ್ವತ್ರೆಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ಚೋಕ್ಸಿಗೆ ಬಾಂಬೆ ಉಚ್ಚ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸಿ ಕೇಂದ್ರ ಸರಕಾರ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

 ಈ ಪ್ರಕರಣವನ್ನು ತುರ್ತು ವಿಚಾರಣೆ ನಡೆಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ಮುಂದೆ ತಿಳಿಸಿದರು.

ಚೋಕ್ಸಿಯನ್ನು ಭಾರತಕ್ಕೆ ತರುವ ಸರಕಾರದ ಪ್ರಯತ್ನದ ಮೇಲೆ ಬಾಂಬೆ ಉಚ್ಚ ನ್ಯಾಯಾಲಯದ ಆದೇಶ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.

 ತನಿಖೆಯಲ್ಲಿ ಪಾಲ್ಗೊಳ್ಳಲು ಆ್ಯಂಟಿಗುವಾದಿಂದ ಭಾರತಕ್ಕೆ ಆಗಮಿಸಲು ಅನಾರೋಗ್ಯದ ಕಾರಣವನ್ನು ಚೋಕ್ಸಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಮೆಹುಲ್ ಚೋಕ್ಸಿಯ ಇತ್ತೀಚಿಗಿನ ವೈದ್ಯಕೀಯ ವರದಿಯನ್ನು ಮುಂಬೈಯ ಜೆಜೆ ಹಾಸ್ಪಿಟಲ್ಸ್ ಆಫ್ ಕಾರ್ಡಿಯಾಲಜಿ ವಿಭಾಗದಲ್ಲಿರುವ ವೈದ್ಯರ ತಂಡಕ್ಕೆ ಸಲ್ಲಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯ ಜೂನ್ 24ರಂದು ಚೋಕ್ಸಿ ಪರ ವಕೀಲರಿಗೆ ನಿರ್ದೇಶಿಸಿತ್ತು.

ಚೋಕ್ಸಿ ಆ್ಯಂಟಿಗುವಾದಿಂದ ಭಾರತಕ್ಕೆ ಪ್ರಯಾಣಿಸರು ಸುದೃಢ ಆರೋಗ್ಯ ಸ್ಥಿತಿ ಹೊಂದಿದ್ದಾರೆಯೇ ಎಂಬ ಬಗೆಗಿನ ಅಭಿಪ್ರಾಯದ ವರದಿಯನ್ನು ಆಸ್ಪತ್ರೆ ಜುಲೈ 9ರಂದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಹೇಳಿತ್ತು. ಅಲ್ಲದೆ, ವಿಚಾರಣೆಯನ್ನು ಜುಲೈ 10ಕ್ಕೆ ನಿಗದಿಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News