ಸಾಲದ ಹೊರೆ ತಗ್ಗಿಸಲು ಕಂಪನಿಯ ಕೇಂದ್ರ ಕಚೇರಿಯನ್ನು ಭೋಗ್ಯಕ್ಕೆ ನೀಡಲಿರುವ ರಿಲಯನ್ಸ್ ಗ್ರೂಪ್

Update: 2019-07-02 15:53 GMT

ಮುಂಬೈ,ಜು.2: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರುಪ್ ಮುಂಬೈನ ಪ್ರಮುಖ ಪ್ರದೇಶದಲ್ಲಿಯ ತನ್ನ ಕೇಂದ್ರ ಕಚೇರಿಯನ್ನು ಭೋಗ್ಯಕ್ಕೆ ನೀಡಲು ನಿರ್ಧರಿಸಿದೆ. ಕಂಪನಿಯ ಈ ಕ್ರಮವು ಅದು ತನ್ನ ಸಾಲ ಮರುಪಾವತಿಗೆ ಹಣಕಾಸನ್ನು ಕ್ರೋಢೀಕರಿಸಲು ನೆರವಾಗಲಿದೆ.

ಅನಿಲ್ ಅಂಬಾನಿ ನಿಯಂತ್ರಣದ ಕೆಲವು ಕಂಪನಿಗಳು ಸರಣಿ ಕ್ರೆಡಿಟ್ ರೇಟಿಂಗ್ಸ್ ಇಳಿಸುವಿಕೆ ಮತ್ತು ಆಡಿಟ್ ವಿವಾದಗಳಿಂದಾಗಿ ಸಂಕಷ್ಟದ ಸುಳಿಯಲ್ಲಿ ಸಿಲುಕಿವೆ.

ರಿಲಯನ್ಸ್ ಇನ್ಫಾ ಸ್ಟ್ರಕ್ಚರ್ ಮುಂಬೈನ ಸಾಂತಾಕ್ರೂಝ್(ಪೂರ್ವ)ದಲ್ಲಿರುವ ತನ್ನ ರಿಲಯನ್ಸ್ ಸೆಂಟರ್ ಕಚೇರಿಯನ್ನು ಭೋಗ್ಯಕ್ಕೆ ನೀಡಲಿದೆ. ರಿಲಯನ್ಸ್‌ನ ಕಚೇರಿಗಳ ಒಡೆತನ ಮುಂದುವರಿಯಲಿದೆ ಮತ್ತು ಭೋಗ್ಯದ ಹಣವನ್ನು ಸಾಲ ಮರುಪಾವತಿಗೆ ಮಾತ್ರ ಬಳಸಿಕೊಳ್ಳಲಾಗುವುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಭೋಗ್ಯಕ್ಕೆ ನೀಡಲು ಉದ್ದೇಶಿಸಿರುವ ಕಂಪನಿಯ ಕೇಂದ್ರ ಕಚೇರಿಯು ಪಶ್ಚಿಮ ಮುಂಬೈನ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ಹೆದ್ದಾರಿಗೆ ಹೊಂದಿಕೊಂಡಿದ್ದು, ಏಳು ಲಕ್ಷ ಚದುರಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು 3,000ಕ್ಕೂ ಅಧಿಕ ಉದ್ಯೋಗಿಗಳು ಇಲ್ಲಿ ದುಡಿಯುತ್ತಿದ್ದಾರೆ. ಈ ಆಸ್ತಿಯು ಅನಿಲ ನೇತೃತ್ವದ ರಿಲಯನ್ಸ್ ಗ್ರೂಪ್‌ನ ಮುಂಚೂಣಿ ಕಂಪನಿಯಾಗಿರುವ ರಿಲಯನ್ಸ್ ಇನ್ಫ್ರಾ ಸ್ಟ್ರಕ್ಚರ್‌ನ ನಿಯಂತ್ರಣದಲ್ಲಿದೆ.

ಆರ್-ಇನ್ಫ್ರಾ ಅಥವಾ ರಿಲಯನ್ಸ್ ಇನ್ಫ್ರಾ ಸ್ಟ್ರಕ್ಚರ್ ಸೇತುವೆಗಳು, ರಸ್ತೆಗಳು, ಮೆಟ್ರೋ ರೈಲು ಮತ್ತು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿ ಅವುಗಳನ್ನು ನಿರ್ವಹಿಸುತ್ತಿದೆ. ಶೈಶವಾವಸ್ಥೆಯಲ್ಲಿರುವ ರಿಲಯನ್ಸ್‌ನ ರಕ್ಷಣಾ ವ್ಯವಹಾರವನ್ನೂ ಅದು ನಿಭಾಯಿಸುತ್ತಿದೆ. ರಿಲಯನ್ಸ್ ಗ್ರುಪ್‌ನಲ್ಲಿ ಹೆಚ್ಚು ಸಾಲಬಾಧಿತ ಕಂಪನಿಗಳ ಪೈಕಿ ಒಂದಾಗಿರುವ ಅದು ಕಳೆದೆರಡು ವರ್ಷಗಳಲ್ಲಿ ತನ್ನ ಹಲವು ಆಸ್ತಿಗಳನ್ನು ಮಾರಾಟ ಮಾಡಿದೆ.

  ಆರ್-ಇನ್ಫ್ರಾ ಹಾಲಿ 15,000 ಕೋ.ರೂ.ಗಳ ಸಾಲವನ್ನು ಹೊಂದಿದೆ. ಕಂಪನಿಯನ್ನು ಮುಂದಿನ ವರ್ಷದ ವೇಳೆಗೆ ಸಾಲಮುಕ್ತವನ್ನಾಗಿಸಲು ಬಯಸಿದ್ದು,ಅದರ ಎಲ್ಲ ರಸ್ತೆ ಆಸ್ತಿಗಳನ್ನು ಮಾರಾಟ ಮಾಡುವುದಾಗಿ ಅನಿಲ ಅಂಬಾನಿ ಕಳೆದ ತಿಂಗಳು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News