ಉ.ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ

Update: 2019-07-02 16:44 GMT

 ಲಕ್ನೋ,ಜು.2: ಜಾರ್ಖಂಡ್‌ನಲ್ಲಿ ಗುಂಪೊಂದು ತಬ್ರೇ ಅನ್ಸಾರಿ ಎಂಬ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿರುವುದನ್ನು ವಿರೋಧಿಸಿ ಅನಧಿಕೃತ ಪ್ರತಿಭಟನಾ ಜಾಥಾಗಳ ಸಂದರ್ಭ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ವೈಫಲ್ಯಕ್ಕಾಗಿ ಆಗ್ರಾ ಮತ್ತು ಮೀರತ್‌ನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರಕಾರವು ಸೋಮವಾರ ತಡರಾತ್ರಿ ವರ್ಗಾವಣೆಗೊಳಿಸಿದೆ.

ಆಗ್ರಾದ ಐಜಿ ಅಲೋಕ್ ಸಿಂಗ್,ಎಸ್‌ಎಸ್‌ಪಿ ಜೋಗೇಂದ್ರ ಕುಮಾರ್ ಮತ್ತು ಮೀರತ್‌ನ ಎಸ್‌ಎಸ್‌ಪಿ ನಿತಿನ್ ತಿವಾರಿ ಅವರು ಎತ್ತಂಗಡಿಗೊಂಡ ಅಧಿಕಾರಿಗಳಾಗಿದ್ದಾರೆ.

ಸೋಮವಾರ ಆಗ್ರಾದಲ್ಲಿ ನಮಾಝ್ ಬಳಿಕ 2,000ಕ್ಕೂ ಅಧಿಕ ಜನರು ತಬ್ರೇಜ್ ಅನ್ಸಾರಿಗೆ ನ್ಯಾಯ ಕೋರಿ ಜಾಥಾವನ್ನು ನಡೆಸಿದ್ದರು. ಇದಕ್ಕಾಗಿ ಅವರು ಪೂರ್ವಾನುಮತಿಯನ್ನು ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಅವರನ್ನು ಮಧ್ಯದಲ್ಲಿಯೇ ತಡೆದ ಪೊಲೀಸರು ಅಹವಾಲನ್ನು ಸಲ್ಲಿಸುವಂತೆ ಮತ್ತು ಶಾಂತಿಯುತವಾಗಿ ಮರಳುವಂತೆ ಸೂಚಿಸಿದ್ದರು. ಆದರೆ ಜಾಥಾದಲ್ಲಿದ್ದ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು,ಗುಂಪನ್ನು ಚದುರಿಸಲು ಪೊಲೀಸರು ಬಲ ಪ್ರಯೋಗಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಐದು ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದ್ದು,ದಾಂಧಲೆ ನಡೆಸಿದ್ದಕ್ಕಾಗಿ 600ಕ್ಕೂ ಅಧಿಕ ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಅತ್ತ ಮೀರತ್‌ ನಲ್ಲಿಯೂ ಜನರು ಗುಂಪು ಸೇರಿದ್ದು,ಅಲ್ಲಿಂದ ತೆರಳುವಂತೆ ಪೊಲೀಸರು ಸೂಚಿಸಿದ್ದರು. ಈ ವೇಳೆ ಜನರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು,ಕೆಲವರು ಪೊಲೀಸರೊಂದಿಗೆ ಸಂಘರ್ಷಕ್ಕೂ ಇಳಿದಿದ್ದರು. ಬಳಿಕ ಪೊಲೀಸರು ಬಲ ಪ್ರಯೋಗದಿಂದ ಗುಂಪನ್ನು ಚದುರಿಸಿದ್ದರು.

ಅಸಹಾಯಕ ಜನರ ವಿರುದ್ಧ ಪೊಲೀಸ್ ಕ್ರಮವನ್ನು ಟೀಕಿಸಿದ ಶಹರ್ ಖಾಝಿ ಝೈನುಸ್ ಸಾಜಿದೀನ್ ಅವರು, ಜಾರ್ಖಂಡ್‌ನಲ್ಲಿ ಅನ್ಸಾರಿ ಹತ್ಯೆಯನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆಗೆ ತಾನು ಶುಕ್ರವಾರದ ನಮಾಝ್ ವೇಳೆ ಕರೆ ನೀಡಿದ್ದೆ. ಇಂತಹ ಪ್ರತಿಭಟನೆಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿದ್ದರಿಂದ ಮೀರತ್ ಆಡಳಿತದ ಅನುಮತಿ ಪಡೆದುಕೊಳ್ಳುವುದು ಸಮಸ್ಯೆಯಲ್ಲ ಎಂದು ಭಾವಿಸಿದ್ದೆವು. ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸಂಪರ್ಕಕ್ಕೇ ಸಿಕ್ಕಿರಲಿಲ್ಲ. ಸೋಮವಾರ ಜನರು ಸೇರಿದಾಗ ಅನುಮತಿ ಇಲ್ಲ ಎಂದು ಎಸ್‌ಎಸ್‌ಪಿ ತಿಳಿಸಿದ್ದರು ಎಂದರು. ಪ್ರತಿಭಟನೆಯನ್ನು ನಡೆಸುವಂತೆ ಕೋರಿ ವಾಟ್ಸ್‌ಆ್ಯಪ್ ಗುಂಪುಗಳು ಸಂದೇಶಗಳನ್ನು ರವಾನಿಸಿದ್ದವು ಎಂದು ಪೊಲೀಸರು ತಿಳಿಸಿದರು. ವದಂತಿಗಳು ಹರಡುವುದನ್ನು ತಡೆಯಲು ಸೋಮವಾರ ಮೀರತ್‌ನಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಮೀರತ್‌ನಲ್ಲಿ 850 ಜನರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News