ಐದು ವರ್ಷಕ್ಕೇ ಅನಾಥನಾದ ಅಬ್ದುಲ್ ನಾಸರ್ ಇವತ್ತು ಐಎಎಸ್ ಅಧಿಕಾರಿ !

Update: 2019-07-02 18:55 GMT

ಛಲ, ಕಠಿಣ ನಿರಂತರ ಪರಿಶ್ರಮ, ಶಿಸ್ತುಬದ್ಧ ಪ್ರಯತ್ನ ಇವಿಷ್ಟು ಇದ್ದರೆ ಮತ್ತೆ ಜೀವನದಲ್ಲಿ ನೀವು ಸಾಧಿಸಬಯಸಿದ್ದನ್ನು ಸಾಧಿಸಲು ಯಾವುದೂ ಅಡ್ಡಿಯಾಗದು ಎಂಬ ಮಾತು ಸತ್ಯ ಎಂದು ಸಾಧಿಸಿ ತೋರಿಸಿದವರು ಕೇರಳದ ಐಎಎಸ್ ಅಧಿಕಾರಿ ಬಿ ಅಬ್ದುಲ್ ನಾಸರ್.

ಅವರು ಜೀವನದಲ್ಲಿ ಕಂಡ ಸಂಕಟ, ಸಮಸ್ಯೆ , ಸವಾಲುಗಳಿಂದ ಕಂಗೆಡದೆ ಅವೆಲ್ಲವನ್ನು ಸಾಧನೆಗೆ ಸೋಪಾನ ಎಂದು ಪರಿಗಣಿಸಿ ಮುಂದೆ ಬಂದವರು. ಹಾಗಾಗಿ ಐದನೇ ವರ್ಷಕ್ಕೇ ತಂದೆಯನ್ನು ಕಳೆದುಕೊಂಡು ಅನಾಥನಾದ ಬಡ ಕುಟುಂಬದ ಹುಡುಗ ಅಬ್ದುಲ್ ನಾಸರ್ ಇವತ್ತು ಕೇರಳದ ಕೊಲ್ಲಮ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ !

ನಾಸರ್ ಅವರ ಯಶೋಗಾಥೆ ಪ್ರತಿಯೊಬ್ಬ ವಿದ್ಯಾರ್ಥಿ ಹಾಗು ಯುವಜನತೆ ಓದಲೇಬೇಕು. ಅಂತಹ ಸ್ಪೂರ್ತಿದಾಯದ ಬದುಕು ಹಾಗು ಸಾಧನೆ ನಾಸರ್ ಅವರದ್ದು. ತಂದೆ ನಿಧನರಾದಾಗ ಐದು ವರ್ಷದ ನಾಸರ್ ಹಾಗು ಅವರ ಐವರು ಒಡಹುಟ್ಟಿದವರಿಗೆ ಬಡತನವೇ ಜೊತೆಗಾರ. ಆದರೆ ಅಂದಿನಿಂದಲೇ ಅವರಿಗೆ ಬೆನ್ನೆಲುಬಾಗಿ ನಿಂತು ಬೆಳೆಸಿದವರು ಅವರ ತಾಯಿ. "ಅವರಲ್ಲದಿದ್ದರೆ ನಾನು ಏನೂ ಆಗುತ್ತಿರಲಿಲ್ಲ . ಇಲ್ಲಿಗೆ ತಲುಪುತ್ತಿರಲಿಲ್ಲ " ಎಂದು ಸ್ಪಷ್ಟವಾಗಿ ಹೇಳುತ್ತಾರೆ ನಾಸರ್. ಐದು ವರ್ಷದ ಹಿಂದೆ ಅವರ ತಾಯಿ ನಿಧನರಾದರು.

ತಾಯಿಯ ಜೊತೆ ನಾಸರ್ ಗೆ ಆಸರೆಯಾಗಿದ್ದು ಕೇರಳದ ಅನಾಥಾಲಯಗಳು. ಮೊದಲು ತಲಶೇರಿಯ ದಾರುಸ್ಸಲಾಮ್ ಅನಾಥಾಲಯ, ಬಳಿಕ ತ್ರಿಶೂರ್ ನ ವಾಟನಪಲ್ಲಿ ಅನಾಥಾಲಯ ನಾಸರ್ ಗೆ ಆಶ್ರಯ ಹಾಗು ಶಿಕ್ಷಣ ನೀಡಿ ಪಿಯುಸಿವರೆಗೆ ಕಲಿಸಿದವು. ಅಲ್ಲಿಂದ ಬೆಂಗಳೂರಿಗೆ ಬಂದ ನಾಸರ್ ಹೆಲ್ತ್ ಇನ್ಸ್ ಪೆಕ್ಟರ್ ಡಿಪ್ಲೊಮಾಗೆ ಸೇರಿದರು. ಅದನ್ನು ಮುಗಿಸಿ ಮತ್ತೆ ಕೇರಳಕ್ಕೆ ಬಂದು ತಲಶೇರಿಯಲ್ಲಿ ಸರಕಾರಿ ಕಾಲೇಜಿನಲ್ಲಿ ಬಿಎ ಇಂಗ್ಲೀಷ್ ಸಾಹಿತ್ಯ ಪದವಿ ಪಡೆದರು. ಈ ಅವಧಿಯಲ್ಲಿ ಟ್ಯೂಷನ್ ನೀಡುವುದು, ಟೆಲಿಫೋನ್ ಆಪರೇಟರ್, ಪತ್ರಿಕೆ ವಿತರಣೆ ಇತ್ಯಾದಿ ಹಲವು ಕೆಲಸಗಳನ್ನು ಮಾಡುತ್ತಲೇ ಶಿಕ್ಷಣ ಮುಂದುವರೆಸಿದರು.

1994 ರಲ್ಲಿ ಕೇರಳದಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿ ಕೆಲಸ ಪ್ರಾರಂಭಿಸಿದ ನಾಸರ್ ನಡುವೆ ಕೆಲ ಸಮಯ ಹಳ್ಳಿಯೊಂದರಲ್ಲಿ ಶಾಲಾ ಶಿಕ್ಷಕರೂ ಆದರು. ಅದೇ ಸಂದರ್ಭದಲ್ಲಿ ಕೇರಳದಲ್ಲಿ ಉಪ ಜಿಲ್ಲಾಧಿಕಾರಿ ಹುದ್ದೆಗೆ ನೇಮಕಾತಿಗಾಗಿ ಕೇರಳ ರಾಜ್ಯ ಲೋಕಸೇವಾ ಆಯೋಗ ಪ್ರಕಟಣೆ ನೀಡಿತು. ಆಗ ನಾಸರ್ ಒಳಗಿದ್ದ ನಾಗರೀಕ ಸೇವಾ ಹುದ್ದೆಯ ಬಯಕೆ ಚಿಗುರೊಡೆಯಿತು. ಪತ್ನಿ , ಶಿಕ್ಷಕಿ ರುಕ್ಸಾನ ಪೂರ್ಣ ಬೆಂಬಲ ನೀಡಿದರು. ಕೆಲಸದಿಂದ ರಜೆ ಪಡೆದು ನಾಸರ್ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸಿದರು. ಅದಕ್ಕಾಗಿ ದೆಹಲಿ, ಅಲಿಘಡ ಮುಂತಾದೆಡೆ ಹೋದರು. ಉತ್ತರ ಭಾರತದಲ್ಲಿ ಅವರಿಗೆ ಜೀವನದಲ್ಲಿ ಹೊಸ ದಿಕ್ಕು ಕಂಡಿತು. ಜಿಲ್ಲಾಧಿಕಾರಿಯಾಗುವ ಆಸೆಗೆ ರೂಪ ಬಂದಿತು.

ಅಲ್ಲಿಂದ ಮರಳಿದ ನಾಸರ್ ಸುಮ್ಮನೆ ಕೂರದೆ 2002 ರಲ್ಲಿ ಎಂ ಎಸ್ ಡಬ್ಲ್ಯೂ ಪೂರ್ಣಗೊಳಿಸಿದರು. ಅಷ್ಟು ಹೊತ್ತಿಗೆ ಉಪ ಜಿಲ್ಲಾಧಿಕಾರಿ ಪರೀಕ್ಷೆ ಪ್ರಕ್ರಿಯೆಯೂ ಪ್ರಾರಂಭವಾಯಿತು. ಪರೀಕ್ಷೆಯನ್ನು , ಬಳಿಕ ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸಿದ ನಾಸರ್ 2006 ರಲ್ಲಿ ಉಪ ಜಿಲ್ಲಾಧಿಕಾರಿಯಾಗಿ ನೇಮಕವಾದರು.

ಹತ್ತು ವರ್ಷಗಳೊಳಗೆ ನಾಸರ್ ತಮ್ಮ ಕಾರ್ಯವೈಖರಿಯ ಮೂಲಕ  ಕೇರಳ ರಾಜ್ಯದಲ್ಲೇ ಅತ್ಯಂತ ದಕ್ಷ ಉಪ ಜಿಲ್ಲಾಧಿಕಾರಿ ಎಂಬ ಶ್ರೇಯಸ್ಸಿಗೆ ಪಾತ್ರರಾದರು. ತಂತ್ರಜ್ಞಾನದ ಮೂಲಕ ಜನರಿಗೆ ಅತ್ಯುತ್ತಮ ಸೇವೆ ನೀಡುವಲ್ಲಿ ನಾಸರ್ ವಿಶೇಷ ಕಾಳಜಿ ವಹಿಸಿದರು. ಅವರ ಮುತುವರ್ಜಿಯಿಂದಲೇ ಕೇರಳ ರಾಜ್ಯ ಆನ್ ಲೈನ್ ಪರೀಕ್ಷೆಗಳನ್ನು ನಡೆಸುವ ಮಾದರಿ ಜಾರಿಗೆ ತಂದಿತು.

ನಾಸರ್ ಅವರೇ ಹೇಳುವಂತೆ ಅವರು ಪ್ರಾಥಮಿಕ , ಪ್ರೌಢ ಶಿಕ್ಷಣ ಹಂತದಲ್ಲೇ ಶಾಲಾ ಕಾಲೇಜುಗಳಲ್ಲಿ ಟಾಪರ್ ಆಗಿರಲಿಲ್ಲ. ಅವರು ಸಾಮಾನ್ಯವಾಗಿ ಪ್ರಥಮ ದರ್ಜೆಗಿಂತ ಕಡಿಮೆ ಅಂಕಗಳನ್ನೇ ಪಡೆಯುತ್ತಿದ್ದರು. ಆದರೆ ಅವರೆಂದೂ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ, ತನ್ನ ಗುರಿಯಿಂದ ವಿಚಲಿತರಾಗಲಿಲ್ಲ, ಶ್ರಮ ಕಡಿಮೆ ಮಾಡಲಿಲ್ಲ, ಕೆಲಸಕ್ಕೆ ಬಂದ ಮೇಲೂ ಅಲ್ಪತೃಪ್ತರಾಗಿ ಅಲ್ಲೇ ಉಳಿಯಲಿಲ್ಲ, ಪ್ರತಿಯೊಂದು ಹುದ್ದೆಯನ್ನು ಶ್ರದ್ಧೆಯಿಂದ, ಉತ್ಸಾಹದಿಂದ ನಿರ್ವಹಿಸಿದರು, ಜನರಿಗೆ ಅತ್ಯುತ್ತಮ ಸೇವೆ ನೀಡುವುದನ್ನೇ ಪರಮ ಗುರಿಯಾಗಿಸಿಕೊಂಡರು, ಜನರೇ ನಮ್ಮ ಒಡೆಯರು ಎಂದು ನಂಬಿ ಕೆಲಸ ಮಾಡಿದರು.

ಇದೆಲ್ಲದರ ಫಲಿತಾಂಶ 2017 ರಲ್ಲಿ ಅವರಿಗೆ ಸಿಕ್ಕಿತು. ಆ ವರ್ಷ ಕೇರಳ ಸರಕಾರ ಅವರಿಗೆ ಭಡ್ತಿ ನೀಡಿ ಐಎಎಸ್ ಹುದ್ದೆಗೆ ನೇಮಕ ಮಾಡಿತು. ಮೊದಲು ರಾಜ್ಯ ವಸತಿ ಆಯುಕ್ತರಾಗಿ ಸೇವೆ ಸಲ್ಲಿಸಿದ ಅಬ್ದುಲ್ ನಾಸರ್ ಈಗ ಕೊಲ್ಲಮ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ. ಪೇಪರ್ ಹಂಚುತ್ತಿದ್ದ ಅನಾಥ ಹುಡುಗ, ಅನಾಥಾಲಯದಿಂದ ಕಾಲೇಜಿಗೆ, ಕಾಲೇಜಿನಿಂದ ಹೆಲ್ತ್ ಇನ್ಸ್ ಪೆಕ್ಟರ್ ಹುದ್ದೆಗೆ, ಅಲ್ಲಿಂದ ಸುದೀರ್ಘ ಪ್ರಯಾಣದ ಬಳಿಕ ಇಂದು ಜಿಲ್ಲಾಧಿಕಾರಿ ಹುದ್ದೆಗೆ ಬಂದು ತಲುಪಿದ್ದಾರೆ.

"ಕೇವಲ ಕನಸು ಕಂಡರೆ ನನಸಾಗದು. ಅದರ ಜೊತೆ ನಿಮ್ಮ ಶ್ರಮ, ಪ್ರಯತ್ನ ಹಾಗು ನಿಮ್ಮ ಆಪ್ತರ ಪ್ರಾರ್ಥನೆ ಇದ್ದರೆ ಏನನ್ನೂ ಸಾಧಿಸಬಹುದು. ಹೆತ್ತವರು ಅದರಲ್ಲೂ ವಿಶೇಷವಾಗಿ ತಾಯಂದಿರು ಮಕ್ಕಳ ಆರೈಕೆ ಸರಿಯಾಗಿ ಮಾಡಿದರೆ ಅದ್ಭುತವನ್ನೇ ಸಾಧಿಸಬಹುದು ಎಂಬುದು ನನ್ನ ಅನುಭವ. ನಾನು ಅನಾಥಾಶ್ರಮದಲ್ಲಿರುವಾಗ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡು ಒಂದೆರಡು ಬಾರಿ ಅಲ್ಲಿಂದ ಹೊರಗೆ ಓಡಿದ್ದೆ . ಆದರೆ ಪ್ರತಿಬಾರಿ ತಾಯಿಯನ್ನು ನೆನೆದು ವಾಪಸ್ ಬಂದಿದ್ದೆ" ಎನ್ನುತ್ತಾರೆ ನಾಸರ್. ಜೊತೆಗೆ ತನಗೆ ಅನಾಥಾಶ್ರಮದಲ್ಲಿ ಸದಾ ಪ್ರೋತ್ಸಾಹ ನೀಡಿ ಬೆಂಬಲಿಸಿದ ಅಲ್ಲಿನ ಮುಖ್ಯಸ್ಥರನ್ನೂ ನಾಸರ್ ಕೃತಜ್ಞತೆಯೊಂದಿಗೆ ನೆನೆಯುತ್ತಾರೆ. 

ಕೃಪೆ : ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News