ವಿಕೃತ ಮನಃಸ್ಥಿತಿಯ ಕಾವಲುಗಾರರು

Update: 2019-07-02 18:38 GMT

ವೈಚಾರಿಕವಾಗಿ ಚಿಂತಿಸುವವರ ಸಾವನ್ನು, ಕೊಲೆಯನ್ನು ಸ್ವಾಗತಿಸುವ, ಸಂಭ್ರಮಿಸುವ ಮನಸ್ಥಿತಿಗೆ ದಿನೇ ದಿನೇ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡು ಹೆಚ್ಚೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಾಗುತ್ತಿರುವುದಕ್ಕೆ ಯಾರನ್ನು ದೂಷಿಸುವುದು? ನಾವು ಜೀವಿಸುತ್ತಿರುವ ವರ್ತಮಾನದ ಸಮಾಜಕ್ಕೆ ಇದೊಂದು ಗಂಭೀರ ಕಾಯಿಲೆಯಾಗಿ, ಅಂಟು ಜಾಡ್ಯವಾಗಿ ತೋರುತ್ತಿಲ್ಲವೇ?

ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳಲು, ಗೌರವಿಸಲು ಸಾಧ್ಯವಾಗದಿದ್ದರೂ ಪ್ರತಿ ವ್ಯಕ್ತಿಗೂ ತನ್ನದೇ ಆದ ಅಭಿಪ್ರಾಯ ಹೊಂದಲು ಅನುವು ಮಾಡಿಕೊಡಬಾರದೇ? ಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಏಕಮಾತ್ರ ಕಾರಣಕ್ಕೆ ಅಂತಹ ವ್ಯಕ್ತಿಗಳು ಜೀವಿಸಲೇ ಅರ್ಹರಲ್ಲ, ಅಂತಹವರು ಸತ್ತಾಗ ಸಂಭ್ರಮಿಸುವುದು ಸಹಜವೆಂದು ಸಮಾಜ ಭಾವಿಸಬಹುದೇ? ಇಂತಹದೊಂದು ಮನಸ್ಥಿತಿಯ ಉತ್ಪಾದನೆಗೆ ಬೇಕಿರುವ ಸಾಮಗ್ರಿಗಳು ರವಾನೆಯಾಗುತ್ತಿರುವುದು ಎಲ್ಲಿಂದ?

ಯು.ಆರ್.ಅನಂತಮೂರ್ತಿ ಅವರ ಸಾವಿನ ನಂತರ, ಗೌರಿ ಲಂಕೇಶ್ ಅವರ ಹತ್ಯೆಯಾದ ಮೇಲೆ ವ್ಯಕ್ತವಾದ ಸಂಭ್ರಮದ ಪ್ರತಿಕ್ರಿಯೆ, ಗಿರೀಶ್ ಕಾರ್ನಾಡ್ ಅವರ ಸಾವಿನ ವೇಳೆಯಲ್ಲೂ ಅನಾವರಣಗೊಂಡಿತು. ಸಾವಿಗೆ ನೊಂದುಕೊಳ್ಳದೆ ಹೋದರೂ, ಕನಿಷ್ಠಪಕ್ಷ ಸಂತಸವಾಗುತ್ತಿದೆ ಎಂದು ಘಂಟಾಘೋಷವಾಗಿ ಹೇಳುವ ವಿಕೃತಿಯ ಕುರಿತಾದರೂ ಆತ್ಮವಿಮರ್ಶೆ ಮಾಡಿಕೊಳ್ಳಲು ಪ್ರೇರೇಪಿಸುವ ವಾತಾವರಣವನ್ನು ಪ್ರಜ್ಞಾವಂತ ಸಮಾಜ ನಿರ್ಮಿಸಬೇಕಿತ್ತು. ಅಂತಹದೊಂದು ಜಾಗೃತ ಪ್ರಜ್ಞೆಯ ಅನುಪಸ್ಥಿತಿ ಸಮಾಜದ ಸ್ವಾಸ್ಥ್ಯದ ಕುರಿತೇ ಅನುಮಾನ ಮೂಡಲು ಇಂಬು ನೀಡುತ್ತಿರುವುದಂತೂ ಸತ್ಯ.

ನಾವು ಅಪ್ಪಿಕೊಂಡ ಧರ್ಮ, ಆಚರಣೆಗಳು, ನಂಬಿಕೆಗಳನ್ನು ವಿಮರ್ಶಿಸುವವರು ಬದುಕಿರಲು ಕೂಡ ಅರ್ಹರಲ್ಲ ಎಂಬ ದುಷ್ಟ ಮನಸ್ಥಿತಿಯೇ ಸಮಾಜದಲ್ಲಿ ಮೌಲ್ಯವಾಗಿ ಪ್ರತಿಷ್ಠಾಪನೆಗೊಂಡರೆ ಅದು ತಂದೊಡ್ಡುವ ಅಪಾಯಗಳ ಕುರಿತು ಈಗಲಾದರೂ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕಿದೆ. ಸಾವನ್ನು ಸಂಭ್ರಮಿಸುವುದು ತಿಳಿವಳಿಕೆ ಇಲ್ಲದ ಬೆರಳೆಣಿಕೆಯಷ್ಟು ಮಂದಿಯನ್ನಷ್ಟೇ ಆವರಿಸಿಕೊಂಡಿರುವ ಜಾಡ್ಯವಲ್ಲವೆಂಬುದು, ಕಾರ್ನಾಡರ ಸಾವಿನಿಂದ ನನಗೇನು ದುಃಖವಾಗುತ್ತಿಲ್ಲ ಎಂದು ನಾಜೂಕಾಗಿ ಹೇಳುವ ಮೂಲಕವೂ ಸಂಭ್ರಮಿಸುವವರ ಪರ ವಕಾಲತ್ತಿಗೆ ನಿಲ್ಲುವ ಓದಿಕೊಂಡಿರುವವರನ್ನು ನೋಡಿಯಾದರೂ ಮನದಟ್ಟು ಮಾಡಿಕೊಳ್ಳಬಹುದು.

ವೈಚಾರಿಕವಾಗಿ ಆಲೋಚಿಸುವ ಬರಹಗಾರರು, ಚಿಂತಕರ ಸಾವಿಗೆ ಸಂಭ್ರಮಿಸುವವರು ಆತುಕೊಂಡಿರುವ ಚಿಂತನಾ ಕ್ರಮ ಯಾವುದು ಮತ್ತು ಅವರನ್ನು ಪ್ರಭಾವಿಸುತ್ತಿರುವ ವಿಚಾರಗಳಾದರೂ ಎಂತಹವು ಎಂಬುದನ್ನು ಅರಿಯಲು ಹೆಚ್ಚೇನು ಶ್ರಮ ವಹಿಸುವ ಅಗತ್ಯವೂ ಇಲ್ಲ. ತಮ್ಮನ್ನು ತಾವು ಧರ್ಮ ರಕ್ಷಕರು, ಧಾರ್ಮಿಕ ವ್ಯಕ್ತಿಗಳು ಎಂದು ಬಿಡುಬೀಸಾಗಿ ಘೋಷಿಸಿಕೊಳ್ಳುವ ವ್ಯಕ್ತಿಗಳೇ ಧರ್ಮ ವಿರೋಧಿ(?)ಗಳ ಸಾವಿಗೆ ಸಂಭ್ರಮಿಸುವವರ ಗುಂಪಿನಲ್ಲಿದ್ದಾರೆ.

ಒಂದೆಡೆ ಯಾವುದೇ ಅಪರಾಧ ಎಸಗದ ಬರಹಗಾರರು, ಚಿಂತಕರ ಸಾವಿಗೆ ಸಂಭ್ರಮಿಸುವ ವ್ಯಕ್ತಿಗಳೇ ಮತ್ತೊಂದೆಡೆ ಗಾಂಧಿ ಹತ್ಯೆ ನಡೆಸಿದ ಗೋಡ್ಸೆಯನ್ನು, ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ಞಾಸಿಂಗ್ ಠಾಕೂರ್‌ರಂತಹವರನ್ನು ಆರಾಧಿಸುತ್ತಿರುವುದು ಕೂಡ ರಹಸ್ಯವಾಗೇನೂ ಉಳಿದಿಲ್ಲ.
ತನ್ನ ಶಕ್ತಿ ವೃದ್ಧಿಸಿಕೊಳ್ಳುವ ಸಲುವಾಗಿ ರಾಜಕೀಯ ಪಕ್ಷವೊಂದು ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತುತ್ತ ಬಂದಿರುವ ಪ್ರೊಪಗಂಡದ ಬಳುವಳಿ ಇದು ಎನ್ನಲು ಸಹ ಸಕಾರಣಗಳೇ ಇವೆ.

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ತಮಗಾದ ಸಂತಸ ಹಂಚಿಕೊಳ್ಳಲು ಬಂದ ನಿವೃತ್ತಿ ಅಂಚಿನಲ್ಲಿರುವ ಪ್ರಾಧ್ಯಾಪಕರೊಬ್ಬರು, ‘‘ನೋಡು ಇನ್ನಾದರೂ ಮೋದಿ ಬಗ್ಗೆ ಏನೇನೋ ಮಾತಾಡೋದು ಬಿಟ್ಟು ನಿನ್ನ ಪಾಡಿಗೆ ನೀನು ಇರೋದನ್ನ ಕಲುತ್ಕೊ. ಏನೋ ನಮ್ ಹುಡ್ಗ ಅಂತ ಬುದ್ಧಿ ಮಾತು ಹೇಳ್ತಾ ಇದೀನಿ. ಇಲ್ಲಾಂದ್ರೆ ಆ ಗೌರಿ ಲಂಕೇಶ್‌ಗೆ ಆದ ಗತಿ ಏನು ಅಂತ ನೀನೇ ನೋಡಿದ್ಯಲ್ಲಾ!’’ ಅಂತ ವ್ಯಂಗ್ಯದ ನಗೆ ಬೀರಿದ್ದರು.
ಇದೇ ಅರ್ಥ ಹೊಮ್ಮಿಸುವ ಬುದ್ಧಿಮಾತನ್ನು ಈ ಮೊದಲೇ ಇನ್ನೂ ಕೆಲವರು ಹೇಳಿದ್ದರಿಂದ ಅದೇನು ವಿಶೇಷವೆನಿಸಿರಲಿಲ್ಲ ಮತ್ತು ಗಂಭೀರವಾಗಿ ಪರಿಗಣಿಸಬೇಕಿರುವ ಸಲಹೆಯಾಗಿಯೂ ತೋರಿರಲಿಲ್ಲ. ಮಾತಿಗೆ ಹೀಗೆ ಹೇಳಿದ್ರೂ ಇವರೊಳಗಿನ ಪ್ರಜ್ಞೆಯಲ್ಲಿ ಈ ಪರಿಯ ಕ್ರೌರ್ಯವಿಲ್ಲವೆಂದೇ ಇಷ್ಟು ದಿನ ಭಾವಿಸಿದ್ದೆ. ಆದರೆ ಹೀಗೆ ಬುದ್ಧಿ ಮಾತು ಹೇಳುವವರು ವೈಚಾರಿಕವಾಗಿ ಚಿಂತಿಸುವ ಯಾರೇ ಆಗಲಿ, ಅವರು ಸತ್ತಾಗ ಸಂಭ್ರಮಿಸುವುದನ್ನು ನೋಡುತ್ತಿದ್ದರೆ ನಿಜಕ್ಕೂ ಆತಂಕವಾಗುತ್ತದೆ. ತಾವು ವಿಕೃತಿ ಮೆರೆಯುವುದಲ್ಲದೆ ತಮ್ಮ ಸುತ್ತಲಿನವರಲ್ಲೂ ಇಂತಹದ್ದೇ ಅವಿವೇಕ ಬಿತ್ತಲು ತೋರುತ್ತಿರುವ ಉಮೇದು ಹೆಚ್ಚು ಆಘಾತಕಾರಿಯಾದುದು.
ಹೀಗೆ ವರ್ತಿಸುವುದು ತಪ್ಪೆನ್ನುವವರ ಸದ್ದಡಗಿಸಲು ಬಳಸುವ ವಾದಗಳು ಕೂಡ ಆಶ್ರಯಿಸುವುದು ರಾಜಕೀಯ ಪಕ್ಷವೊಂದು ತನ್ನ ಪ್ರೊಪಗಂಡ ಬಿತ್ತಲು ಬಳಸಿಕೊಂಡ ಹುಸಿ ಅಂಶಗಳನ್ನೇ ಎನ್ನುವುದು ಕೂಡ ಇಲ್ಲಿ ಗಮನಾರ್ಹವೇ.
ಸಾವನ್ನಪ್ಪಿದ ವ್ಯಕ್ತಿಗಳ ಕುರಿತೂ ವಸ್ತುನಿಷ್ಠವಾಗಿ ಮಾತನಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಯಾವುದೇ ವ್ಯಕ್ತಿಯನ್ನು ಅವರ ಇತಿಮಿತಿಗಳೊಂದಿಗೆ ಒಪ್ಪಿಕೊಳ್ಳಬೇಕಿರುವುದು, ಗ್ರಹಿಸಬೇಕಿರುವುದು ಸಹಜವೇ. ಆದರೆ, ಸಾವನ್ನು ಸಂಭ್ರಮಿಸುವುದಕ್ಕೆ ಅವು ನೆಪವಾಗಲಾರವು. ಸಾವು ಸಂಭ್ರಮವಾಗಲು ಹೇಗೆ ಸಾಧ್ಯ? ಅದನ್ನು ಸಾಧ್ಯವಾಗಿಸುವತ್ತ ದಾಪುಗಾಲಿಡುತ್ತಿರುವ ಸಮಾಜ ಎಂತಹದಿರಬಹುದು?
ಕೇವಲ ಸಾವಿಗೆ ಸಂಭ್ರಮಿಸುವವರತ್ತ ಬೆಟ್ಟು ಮಾಡುವ ಬದಲು, ಇಂತಹ ಮನಸ್ಥಿತಿಯ ಬೆಳವಣಿಗೆಗೆ ಕಾರಣವಾಗುತ್ತಿರುವ ಕಾರ್ಯಸೂಚಿಯನ್ನು ಬಿತ್ತುತ್ತಿರುವ ಪ್ರಭುತ್ವದತ್ತಲೂ ನಮ್ಮ ಗಮನ ಕೇಂದ್ರೀಕೃತಗೊಳ್ಳಬೇಕಿದೆ.


ಇ-ಮೇಲ್: hksharu@gmail.com

Writer - ಎಚ್. ಕೆ. ಶರತ್

contributor

Editor - ಎಚ್. ಕೆ. ಶರತ್

contributor

Similar News