×
Ad

ಕರ್ತಾರ್‌ಪುರ ಯೋಜನೆ: ಭಾರತ- ಪಾಕ್ ಜಂಟಿಸಭೆಗೆ ಮುಹೂರ್ತ

Update: 2019-07-03 09:37 IST

ಇಸ್ಲಾಮಾಬಾದ್, ಜು.3: ಕರ್ತಾರ್‌ಪುರ ಯೋಜನೆಯನ್ನು ನವೆಂಬರ್ ಒಳಗಾಗಿ ಪೂರ್ಣಗೊಳಿಸುವಂತೆ ಭಾರತ ಪಾಕಿಸ್ತಾನಕ್ಕೆ ಗಡುವು ನೀಡಿದೆ. ಈ ಮೂಲಕ ಸಿಕ್ಖ್ ಸಮುದಾಯದವರು ಪಾಕಿಸ್ತಾನದ ನರ್ವಾಲ್ ಜಿಲ್ಲೆಯ ದರ್ಬಾರ್ ಸಾಹಿಬ್‌ನಲ್ಲಿ ಗುರುನಾನಕ್ ಅವರ 550ನೇ ಜಯಂತಿಯ ಆಚರಣೆಗೆ ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರ ಒತ್ತಾಯಿಸಿದೆ. ಈ ಹಿನ್ನೆಯಲ್ಲಿ ಜುಲೈ 11 ಮತ್ತು ಜುಲೈ 14ರಂದು ಕಾರಿಡಾರ್ ಯೋಜನೆಯನ್ನು ಅಂತಿಮಪಡಿಸುವ ಬಗ್ಗೆ ಚರ್ಚಿಸಲು ಉಭಯ ದೇಶಗಳ ಜಂಟಿ ಕಾರ್ಯದರ್ಶಿ ಮಟ್ಟದ ಸಭೆ ನಡೆಸುವ ಪ್ರಸ್ತಾವವನ್ನು ಮುಂದಿಟ್ಟಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

ಪ್ರಯಾಣಿಕರ ಟರ್ಮಿನಲ್, ಚತುಷ್ಪಥ ಹೆದ್ದಾರಿ ಮತ್ತು ರಾವಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಭಾರತದ ಕಡೆಯಿಂದ ಪ್ರಗತಿಯಲ್ಲಿದ್ದು, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಮಾತ್ರವಲ್ಲದೆ ಭಾರತೀಯ ಮೂಲದ ವ್ಯಕ್ತಿಗಳಿಗೆ (ಪಿಐಒ) ಕೂಡಾ ಐತಿಹಾಸಿಕ ಮಂದಿರಕ್ಕೆ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ಭಾರತವು ಪಾಕಿಸ್ತಾನವನ್ನು ಒತ್ತಾಯಿಸಿದೆ. ಸದ್ಯ ಪಾಕಿಸ್ತಾನ ಸರ್ಕಾರ ಭಾರತದ ಪಾಸ್‌ಪೋರ್ಟ್ ಹೊಂದಿರುವವರಿಗೆ ಮಾತ್ರ ಈ ಅವಕಾಶ ನೀಡಿದ್ದು, ಪಿಐಒಗಳು ಪಾಕಿಸ್ತಾನದ ಯಾತ್ರಾ ವೀಸಾ ಪಡೆಯಬೇಕು ಎಂದು ಹೇಳಿದೆ.

ಯಾತ್ರಿಗಳು ಕರ್ತಾರ್‌ಪುರ ಮಂದಿರಕ್ಕೆ ಯಾವುದೇ ಪರವಾನಿಗೆ ಪಡೆಯದೇ ಹಾಗೂ ಹೆಚ್ಚುವರಿ ಶುಲ್ಕ ಪಾವತಿಸದೇ ಪಾದಯಾತ್ರೆಯಲ್ಲಿ ತೆರಳಲೂ ಅವಕಾಶ ನೀಡಬೇಕು ಎನ್ನುವುದು ಭಾರತದ ಮತ್ತೊಂದು ಬೇಡಿಕೆ. ಈ ಪ್ರದೇಶ ದೇರಾ ಬಾಬಾ ನಾನಕ್‌ನ ಪಶ್ಚಿಮಕ್ಕೆ ಅಂತಾರಾಷ್ಟ್ರೀಯ ಗಡಿಯಿಂದ ಐದು ಕಿಲೋಮೀಟರ್ ದೂರದಲ್ಲಿದೆ.

ಕರ್ತಾರ್‌ಪುರದಲ್ಲಿರುವ ದರ್ಬಾರ್‌ಸಾಹಿಬ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರಾವಿ ನದಿಗೆ ಅಡ್ಡಲಾಗಿ 200-300 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಭಾರತ ಮುಂದಾಗಿದೆ. ವರ್ಷವಿಡೀ ಪ್ರತಿದಿನ 5 ಸಾವಿರ ಯಾತ್ರಿಗಳು ಈ ಮಂದಿರಕ್ಕೆ ಭೇಟಿ ನೀಡಲು ಅವಕಾಶ ನೀಡಬೇಕು ಮತ್ತು ಗುರುನಾನಕ್ ಜಯಂತಿಯಂಥ ವಿಶೇಷ ಸಂದರ್ಭಗಳಲ್ಲಿ 15 ಸಾವಿರ ಮಂದಿ ಭೇಟಿ ನೀಡಲು ಅವಕಾಶ ನೀಡಬೇಕು ಎನ್ನುವುದು ಭಾರತದ ಆಗ್ರಹ. ಆದರೆ ಪಾಕಿಸ್ತಾನ ಸೀಮಿತ ದಿನಗಳಲ್ಲಿ 500-700 ಮಂದಿಯ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News