ಬಿಯರ್ ಬಾಟಲಿಗಳಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರ: ಕ್ಷಮೆ ಕೇಳಿದ ಇಸ್ರೇಲ್ ಕಂಪೆನಿ

Update: 2019-07-03 14:52 GMT

ಹೊಸದಿಲ್ಲಿ, ಜು.3: ಇಸ್ರೇಲ್‌ನ 71ನೇ ಸ್ವಾತಂತ್ರೋತ್ಸವದ ಸ್ಮರಣಾರ್ಥ ಮದ್ಯದ ಬಾಟಲಿಗಳ ಮೇಲೆ ಮಹಾತ್ಮಾ ಗಾಂಧಿ ಭಾವಚಿತ್ರವನ್ನು ಹಾಕಿದ್ದ ಇಸ್ರೇಲ್ ಕಂಪೆನಿ ಬುಧವಾರ ಭಾರತೀಯರು ಮತ್ತು ಭಾರತ ಸರಕಾರದ ಕ್ಷಮೆ ಕೇಳಿದೆ ಎಂದು ಪಿಟಿಐ ವರದಿ ಮಾಡಿದೆ.

 “ನಾವು ಮಹಾತ್ಮಾ ಗಾಂಧೀಜಿ ಅವರಿಗೆ ಅತೀಹೆಚ್ಚು ಗೌರವ ಮತ್ತು ಮೌಲ್ಯವನ್ನು ನೀಡುತ್ತೇವೆ. ಅವರ ಭಾವಚಿತ್ರವನ್ನು ಮದ್ಯದ ಬಾಟಲಿಗಳ ಮೇಲೆ ಹಾಕಿರುವುದಕ್ಕೆ ನಾವು ಖೇದ ವ್ಯಕ್ತಪಡಿಸುತ್ತೇವೆ. ಮಲ್ಕಾ ಬಿಯರ್ ಭಾರತದ ಜನರ ಭಾವನೆಗೆ ಧಕ್ಕೆಯುಂಟು ಮಾಡಿದ ಕಾರಣಕ್ಕೆ ಪ್ರಜೆಗಳ ಮತ್ತು ಭಾರತ ಸರಕಾರದ ಕ್ಷಮೆ ಕೇಳುತ್ತೇವೆ” ಎಂದು ಕಂಪೆನಿಯ ಬ್ರಾಂಡ್ ವ್ಯವಸ್ಥಾಪಕ ಗಿಲಡ್ ಡ್ರೊರ್ ತಿಳಿಸಿದ್ದಾರೆ. ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೂಡಲೇ ನಾವು ಇಂತಹ ಬಾಟಲಿಗಳ ತಯಾರಿಕೆ ಮತ್ತು ಪೂರೈಕೆಯನ್ನು ಸ್ಥಗಿತಗೊಳಿಸಿದ್ದೇವೆ ಮತ್ತು ಮಾರುಕಟ್ಟೆಯಿಂದ ಈ ಬಾಟಲಿಗಳನ್ನು ಹಿಂಪಡೆಯಲು ಕಂಪೆನಿ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

“ನಾವು ಮಹಾತ್ಮಾ ಗಾಂಧಿಯವರಿಗೆ ಗೌರವ ಸೂಚಿಸಲು ಬಯಸಿದ್ದೆವು. ಈ ಹಿಂದೆ ಇಸ್ರೇಲ್‌ನ ಸ್ವಾತಂತ್ರ ದಿನದ ಸ್ಮರಣಾರ್ಥ ಡೇವಿಡ್ ಬೆನ್-ಗುರ್ಯೊನ್, ಗೊಲ್ಡ ಮೀರ್ ಮತ್ತು ಮೆನಶೆಮ್ ಬೆಗಿನ್ ಹಾಗೂ ಝಿಯೊವಾದದ ಪಿತಾಮಹ ಥಿಯೊಡರ್ ಹರ್ಝ್‌ಲ್ ಅವರ ಭಾವಚಿತ್ರಗಳನ್ನು ಬಾಟಲಿ ಮೇಲೆ ಹಾಕಿದ್ದೆವು” ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News