ಕೈದಿಯ ಕಸ್ಟಡಿ ಸಾವು ಪ್ರಕರಣ: ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನ

Update: 2019-07-03 16:22 GMT

 ತಿರುವನಂತಪುರ, ಜು. 3: ಕೈದಿಯೋರ್ವನ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಕ್ರೈಮ್ ಬ್ರಾಂಚ್ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬುಧವಾರ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ ಎಂದು ಕ್ರೈಮ್ ಬ್ರಾಂಚ್ ತಿಳಿಸಿದೆ.

ಸಬ್ ಇನ್ಸ್‌ಪೆಕ್ಟರ್ ಕೆ.ಎ. ಸಾಬು ಹಾಗೂ ಸಿವಿಲ್ ಪೊಲೀಸ್ ಅಧಿಕಾರಿ ಸಂಜೀವ್ ಆ್ಯಂಟನಿ ವಿರುದ್ಧ ಕ್ರೈಮ್ ಬ್ರಾಂಚ್ ಕಾನೂನು ಬಾಹಿರ ಬಂಧನ ಹಾಗೂ ಕಸ್ಟಡಿ ಹಿಂಸೆಯ ಆರೋಪ ಹೊರಿಸಿದೆ.

ಘಟನೆಗೆ ಸಂಬಂಧಿಸಿ ನಾಲ್ವರು ಪೊಲೀಸ್ ಸಿಬ್ಬಂದಿ ಸಾಬು, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇತರ 8 ಮಂದಿ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ.

ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜೂನ್ 12ರಂದು ಬಂಧಿತನಾಗಿದ್ದ 49 ವರ್ಷದ ರಾಜ್ ಕುಮಾರ್‌ಗೆ ನೆಡುಂಕಂಡಂ ಪೊಲೀಸ್ ಠಾಣೆ ಕಸ್ಟಡಿಯಲ್ಲಿ ನಾಲ್ಕು ದಿನಗಳ ಕಾಲ ಹಿಂಸೆ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಅನಂತರ ರಾಜ್‌ಕುಮಾರ್ ಪೀರ್ಮೇಡು ಸಬ್ ಜೈಲಿನಲ್ಲಿ ಜೂನ್ 21ರಂದು ಮೃತಪಟ್ಟಿದ್ದ. ರಾಜ್‌ಕುಮಾರ್ ದೇಹದಲ್ಲಿ 22 ಗಾಯದ ಗುರುತುಗಳಿದ್ದವು. ತೀವ್ರ ದೈಹಿಕ ಹಲ್ಲೆಯಿಂದ ಸೋಂಕಿಗೊಳಗಾಗಿ ಆತ ಮೃತಪಟ್ಟಿದ್ದಾನೆ ಎಂದು ವಿಧಿವಿಜ್ಞಾನ ವೈದ್ಯರು ವರದಿ ನೀಡಿದ್ದರು.

 ಈ ಘಟನೆ ಬೆಳಕಿಗೆ ಬಂದ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಘಟನೆಯಲ್ಲಿ ಪಾಲ್ಗೊಂಡ ಪೊಲೀಸರನ್ನು ರಕ್ಷಿಸುವ ಪ್ರಯತ್ನ ಮಾಡಲಿಲ್ಲ. ‘‘ಕಾನೂನು ಬಾಹಿರವಾಗಿ ಯಾರೊಬ್ಬರನ್ನೂ ಕಸ್ಟಡಿಯಲ್ಲಿ ಇರಿಸುವ ಹಾಗೂ ಥಳಿಸಿ ಸಾಯಿಸುವ ಹಕ್ಕು ಯಾರಿಗೂ ಇಲ್ಲ’’ ಎಂದು ಪಿಣರಾಯಿ ವಿಜಯನ್ ರಾಜ್ಯ ವಿಧಾನ ಸಭೆಯಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News