ಕೃತಿಚೌರ್ಯ ಆರೋಪ ತಿರಸ್ಕರಿಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

Update: 2019-07-03 17:39 GMT

ಹೊಸದಿಲ್ಲಿ, ಜು. 3: ಸಂಸತ್ತಿನಲ್ಲಿ ಮಾಡಿದ ತನ್ನ ಚೊಚ್ಚಲ ಭಾಷಣ ‘ಸೆವೆನ್ ಸೈನ್ ಆಫ್ ಫ್ಯಾಶಿಸಂ’ ಕಳೆದ ವಾರ ವೈರಲ್ ಆದ ಬಳಿಕ ಅದು ಕೃತಿ ಚೌರ್ಯ ಎಂಬ ಆರೋಪದ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ಈ ಆರೋಪಕ್ಕೆ ಕಾರಣವಾದ ಬಿಜೆಪಿಯ ‘ಟ್ರೋಲ್ ಸೇನೆ’ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೂಲವನ್ನು ಬಹಿರಂಗಪಡಿಸದೇ ಇದ್ದರೆ ಕೃತಿಚೌರ್ಯ ಎಂದು ಹೇಳಬಹುದು. ರಾಜಕೀಯ ವಿಜ್ಞಾನಿ ಡಾ. ಲಾರೆನ್ಸ್ ಡಬ್ಲ್ಯು. ಬ್ರಿಟ್ ಫ್ಯಾಶಿಸಂನ ಆರಂಭದ 14 ಚಿಹ್ನೆಗಳನ್ನು ಗುರುತಿಸಿದ್ದರು. ಈ ಚಿಹ್ನೆಗಳನ್ನು ಒಳಗೊಂಡ ಪೋಸ್ಟರ್ ಅನ್ನು ಅಮೆರಿಕದ ಹಾಲೋಕಾಸ್ಟ್ ಮ್ಯೂಸಿಯಂನಲ್ಲಿ ಹಾಕಲಾಗಿದೆ. ಈ ಪೋಸ್ಟರ್ ತನಗೆ ಮೂಲ ಎಂದು ಭಾಷಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದೆ. ಆದುದರಿಂದ ಅದು ಕೃತಿ ಚೌರ್ಯ ಹೇಗಾಗುತ್ತದೆ ಎಂದು ಮೊಯಿತ್ರಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

‘‘ನಾನು ಭಾರತದಲ್ಲಿ ಫ್ಯಾಶಿಸಂಗೆ ಸಂಬಂಧಿತ 7 ಚಿಹ್ನೆಗಳನ್ನು ಪತ್ತೆ ಮಾಡಿದ್ದೇನೆ. ಈ ಪ್ರತಿಯೊಂದು ಚಿಹ್ನೆಯ ಬಗ್ಗೆ ದೀರ್ಘವಾಗಿ ಮಾತನಾಡಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಭಾಷಣದಲ್ಲಿ ವಾಷಿಂಗ್ಟನ್ ಮಂಥ್ಲಿ ಆರ್ಟಿಕಲ್‌ನಲ್ಲಿ ಪ್ರಕಟವಾದ ಅಮೆರಿಕ ಹಾಗೂ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಪ್ ಅನ್ನು ಉಲ್ಲೇಖಿಸಿದ ‘‘12 ಅರ್ಲಿ ವಾರ್ನಿಂಗ್ ಸೈನ್ಸ್ ಆಫ್ ಫ್ಯಾಶಿಸಂ’’ನ ಕೆಲವು ಭಾಗಗಳನ್ನು ಕದ್ದಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು. ತಾನು ಭಾಷಣದಲ್ಲಿ ಉಲ್ಲೇಖಿಸಿದ ಪೋಸ್ಟರ್‌ನಿಂದಲೇ ಲೇಖನ ಉಲ್ಲೇಖಗಳನ್ನು ಮಾಡಿದೆ ಎಂದು ಪಶ್ಚಿಮಬಂಗಾಳ ಕೃಷ್ಣನಗರದ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News