ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಕೌನ್ಸಿಲ್‌ನಿಂದ ದ.ಕ. ಜಿಲ್ಲೆಯಲ್ಲಿ 10 ಲಕ್ಷ ಗಿಡ ನೆಡುವ ಯೋಜನೆ

Update: 2019-07-04 13:25 GMT

ಮಂಗಳೂರು, ಜು.2: ಹಸಿರು ಪರಿಸರ ನಿರ್ಮಾಣಕ್ಕೆ ವಿಶೇಷ ಮಹತ್ವವನ್ನು ನೀಡುವ ಸಲುವಾಗಿ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್ ದ.ಕ. ಜಿಲ್ಲೆಯ ಮಸೀದಿ, ಮದ್ರಸ, ಮಸೀದಿ ಆಡಳಿತ ಸಮಿತಿ ಅನುಮತಿಸಿದ ಬೇರೆ ಯಾವುದೇ ಸ್ಥಳ, ಜಮಾಅತ್ ಸದಸ್ಯರ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಇಲಾಖೆ,  ಸಂಘಸಂಸ್ಥೆಗಳು ಮತ್ತು ಸ್ಥಳೀಯ ಮಸೀದಿಗಳ ಸಹಕಾರದಲ್ಲಿ ಸುಮಾರು 10 ಲಕ್ಷ ಗಿಡ ನೆಟ್ಟು ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದೆ.

ಮರಗಿಡಗಳನ್ನು ಕಡಿದ ಕಾರಣ ಜಾಗತಿಕ ತಾಪಮಾನ ಹೆಚ್ಚಾಗಿದೆ. ವರ್ಷ ಹೋದಂತೆಲ್ಲಾ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಮರಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣದಿಂದ ನಮ್ಮ ಭೂಮಿಯನ್ನು ರಕ್ಷಿಸಲು ಸಾಧ್ಯವಿದೆ. ಪ್ರವಾದಿ ಮುಹಮ್ಮದ್(ಸ.) ಮರ ಗಿಡಗಳನ್ನು ನೆಟ್ಟು ಬೆಳೆಸುವುದಕ್ಕೆ ಬಹಳಷ್ಟು ಒತ್ತನ್ನು ನೀಡಿದ್ದಾರೆ ಎಂದು ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್ ವಿವರಿಸಿದೆ.

ಪ್ರವಾದಿ ಮುಹಮ್ಮದ್ (ಸ.) ಹಸಿರು ಪರಿಸರ ನಿರ್ಮಾಣಕ್ಕೆ ಕೊಟ್ಟಿರುವ ಪ್ರಾಮುಖ್ಯತೆ ಹಾಗೂ ಕಾಲದ ಅತೀ ಅಗತ್ಯ ಬೇಡಿಕೆಯ ವಿಷಯವಾದುದರಿಂದ ಈ ಯೋಜನೆಯನ್ನು ಕೈಗೆತ್ತಿಕೊಂಡಿರುತ್ತೇವೆ. ಈಗಾಗಲೇ ದ.ಕ. ಜಿಲ್ಲೆಯ ಅನೇಕ ಮಸೀದಿ ಆಡಳಿತ ಸಮಿತಿಯು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದೆ ಬಂದಿವೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ದ.ಕ. ಜಿಲ್ಲೆಯ ಎಲ್ಲಾ ಮಸೀದಿಗಳ ಆಡಳಿತ ಸಮಿತಿ ಹಾಗೂ ಸಂಘ ಸಂಸ್ಥೆಗಳು ನಮ್ಮೆಂದಿಗೆ ಸಹಕರಿಸುವಂತೆ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್‌ಮೆಂಟ್ ಕೌನ್ಸಿಲ್ ಸಲಹಾ ಸಮಿತಿಯ ಸದಸ್ಯರಾದ ಅಲ್ಹಾಜ್ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಲ್ಹಾಜ್ ಹಝ್ರತ್ ಡಾ. ಫಾಝಿಲ್ ರಝ್ವಿ ಕಾವಲ್‌ಕಟ್ಟೆ, ಮುಫ್ತಿ ಅಬ್ದುಲ್ ಮನ್ನಾನ್, ಮಸ್ಜಿದ್ ವನ್ ಮೂವ್‌ಮೆಂಟ್ ದ.ಕ. ಜಿಲ್ಲಾಧ್ಯಕ್ಷ ಅಹ್ಮದ್ ಮೊಯ್ದಿನ್, ಉಪಾಧ್ಯಕ್ಷರಾದ ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ, ನೌಷಾದ್ ಹಾಜಿ ಸೂರಲ್ಪಾಡಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೈನ್ ನೂರ್, ಸಂಚಾಲಕ ಮುಸ್ತಫ ಭಾರತ್, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್, ಕಾರ್ಯದರ್ಶಿಗಳಾದ ಆರಿಫ್ ಬಾವ, ರಫೀಕ್ ಮಾಸ್ಟರ್, ಎಸ್.ಎಂ.ಫಾರೂಕ್ ಮತ್ತು ನಝೀರ್ ಅಹ್ಮದ್ ಸಂಯುಕ್ತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬಾವುಟಗುಡ್ಡೆ ಈದ್ಗಾ ಮಸೀದಿಯ ಎದುರು ಇರುವ ಕೆ.ಎಸ್.ಆರ್. ಮೆಮೋರಿಯಲ್ ಟ್ರಸ್ಟ್ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ: 9606622638.

''ರಕ್ತದಾನ ಮಾಡಿದರೆ ಒಂದು ಜೀವವನ್ನು ಉಳಿಸಬಹುದು. ಅದೇ ನಾವು ಮರಗಳನ್ನು ನೆಟ್ಟು ಬೆಳೆಸಿದರೆ ಇಡೀ ಜೀವ ಸಂಕುಲವನ್ನು ಉಳಿಸುವ ಕೆಲಸವಾಗುತ್ತದೆ. ಇಸ್ಲಾಂ ಪರಿಸರ ಸಂರಕ್ಷಣೆಗೆ ಬಹಳ ಮಹತ್ವ ನೀಡಿದೆ. ಪರಿಸರ ಹಾಗು ನೀರಿಗೆ ಸಂಬಂಧಿಸಿ ಇತ್ತೀಚಿಗೆ ಬರುತ್ತಿರುವ ವರದಿಗಳು ಅತ್ಯಂತ ಆತಂಕಕಾರಿಯಾಗಿವೆ.  ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವ ತುರ್ತು ಅಗತ್ಯವನ್ನು ಮನಗಂಡು  ಆಲ್ ಇಂಡಿಯಾ ಮುಸ್ಲಿಂ ಡೆವೆಲಪಮೆಂಟ್ ಕೌನ್ಸಿಲ್ ಈ ಹೊಸ ಯೋಜನೆ ಹಾಕಿಕೊಂಡಿದೆ''.

ಅಹ್ಮದ್ ಮೊಯ್ದಿನ್ 
ಅಧ್ಯಕ್ಷರು, ಎಐಎಂಡಿಸಿ ಮಸ್ಜಿದ್ ಒನ್ ಮೂವ್ ಮೆಂಟ್, ದ.ಕ. ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News