ನ್ಯಾಯಾಲಯಕ್ಕೆ ಬಂದಿದ್ದ ರಾಹುಲ್‌ಗೆ ರಾಜೀನಾಮೆ ಹಿಂಪಡೆಯಲು ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

Update: 2019-07-04 13:35 GMT

ಮುಂಬೈ,ಜು.4: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಆರೆಸ್ಸೆಸ್‌ಗೂ ತಳುಕು ಹಾಕಿದ್ದಕ್ಕಾಗಿ ಮಾನನಷ್ಟ ಪ್ರಕರಣವೊಂದರಲ್ಲಿ ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಇಲ್ಲಿಯ ಮಝಗಾಂವ್ ಮಹಾನಗರ ನ್ಯಾಯಾಲಯಕ್ಕೆ ಆಗಮಿಸಿದ ಸಂದರ್ಭ ಹೊರಗಡೆ ಸೇರಿದ್ದ ಪಕ್ಷದ ಹಲವಾರು ಕಾರ್ಯಕರ್ತರು ಕೈಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿ ಪಕ್ಷಾಧ್ಯಕ್ಷ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ರಾಹುಲ್ ಬೆಳಿಗ್ಗೆ ಮುಂಬೈಗೆ ಬಂದಿಳಿದಾಗ ವಿಮಾನ ನಿಲ್ದಾಣದ ಹೊರಗೆ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಹ ಇಂತಹುದೇ ಘೋಷಣೆಗಳನ್ನು ಕೂಗಿದ್ದರು.

ನ್ಯಾಯವಾದಿ ಹಾಗೂ ಆರೆಸ್ಸೆಸ್ ಕಾರ್ಯಕರ್ತ ಧೃತಿಮಾನ ಜೋಶಿ ಅವರು ದಾಖಲಿಸಿರುವ ಈ ಮಾನನಷ್ಟ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾಗಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರೂ ರಾಹುಲ್ ಬೆನ್ನಲ್ಲೇ ನ್ಯಾಯಾಲಯಕ್ಕೆ ಆಗಮಿಸಿದರು.

ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ನ್ಯಾಯಾಲಯದ ಆವರಣದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿತ್ತು.

ಮಹಾನಗರ ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ ರಾಹುಲ್ ಮತ್ತು ಯೆಚೂರಿ ಅವರಿಗೆ ಸಮನ್ಸ್ ಹೊರಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News