ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಬಹಿರಂಗಕ್ಕೆ ದಾರಿ ಮಾಡಿದ ಹೊಸ ಆದೇಶ

Update: 2019-07-04 15:18 GMT

ಹೊಸದಿಲ್ಲಿ, ಜು.4: ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಆಕ್ಷೇಪ ಎತ್ತಿರುವ ಪ್ರಧಾನ ಮಂತ್ರಿಗಳ ಕಚೇರಿಯ ನಡೆಯನ್ನು ಸರಿಯಲ್ಲ ಎಂದು ತಿಳಿಸಿರುವ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ)ದ ನೂತನ ಆದೇಶ ಕೇಂದ್ರ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಗೊಳಿಸಲು ದಾರಿ ಸುಗಮಗೊಳಿಸಿದೆ.

ಭಾರತೀಯ ಅರಣ್ಯ ಸೇವೆಯ 2002ರ ಬ್ಯಾಚ್‌ನ ಅಧಿಕಾರಿ ಸಂಜೀವ್ ಚತುರ್ವೇದಿ ಅವರು, 2014ರಿಂದ ಮಾಹಿತಿ ಹಕ್ಕಿನಡಿ ಅರ್ಜಿ ಹಾಕುವ ದಿನದವರೆಗೆ ಕೇಂದ್ರ ಸಚಿವರ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ದೂರುಗಳ ವಿವರವನ್ನು ನೀಡುವಂತೆ 2017ರ ಆಗಸ್ಟ್‌ನಲ್ಲಿ ಪ್ರಧಾನಿ ಕಚೇರಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ 2017ರ ಅಕ್ಟೋಬರ್‌ನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಕಚೇರಿ, ಈ ಮಾಹಿತಿ ವಿಶಿಷ್ಟ ಮತ್ತು ಅಸ್ಪಷ್ಟವಾಗಿದೆ ಎಂದು ತಿಳಿಸುತ್ತಾ ಮಾಹಿತಿ ನಿರಾಕರಿಸಲು ಸಿಐಸಿಯ ಹಿಂದಿನ ಆದೇಶವನ್ನು ಉಲ್ಲೇಖಿಸಿತ್ತು. ಇದರ ವಿರುದ್ಧ ಚತುರ್ವೇದಿ ಸಿಐಸಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಐಸಿ ನೀಡಿದ ಆದೇಶದಲ್ಲಿ, ಅರ್ಜಿದಾರರಿಗೆ ಸರಿಯಾದ ಮತ್ತು ನಿರ್ದಿಷ್ಟ ಮಾಹಿತಿ/ಉತ್ತರ ನೀಡಲಾಗಿಲ್ಲ ಎಂದು ತಿಳಿಸಿತ್ತು. ಅರ್ಜಿದಾರರಿಗೆ 15 ದಿನಗಳ ಒಳಗಾಗಿ ಸಂಪೂರ್ಣ ಮಾಹಿತಿ ಒದಗಿಸುವಂತೆ ಪ್ರಧಾನಿ ಕಚೇರಿಯ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಆಯೋಗ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News