ಪಾಕ್ ವಾಯುಪ್ರದೇಶ ಮುಚ್ಚಿದ್ದರಿಂದ ಇಂಡಿಯನ್ ಏರ್‌ಲೈನ್ಸ್‌ಗೆ 549 ಕೋಟಿ ರೂ. ನಷ್ಟ

Update: 2019-07-04 15:40 GMT

ಹೊಸದಿಲ್ಲಿ, ಜು.4: ಪಾಕಿಸ್ತಾನವು ಫೆಬ್ರವರಿ 27ರಿಂದ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಇಂಡಿಯನ್ ಏರ್‌ಲೈನ್ಸ್ ಸಂಸ್ಥೆಗೆ ಸುಮಾರು 549 ಕೋಟಿ ರೂ.ನಷ್ಟವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ಸಿಂಗ್ ಪುರಿ ಹೇಳಿದ್ದಾರೆ.

ವಾಯುಪ್ರದೇಶ ಮುಚ್ಚುವ ಬಗ್ಗೆ ಪಾಕಿಸ್ತಾನ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಈಗ ನಿಷೇಧವನ್ನು ತೆರವುಗೊಳಿಸುವುದು ಆ ದೇಶಕ್ಕೆ ಬಿಟ್ಟಿರುವ ವಿಷಯವಾಗಿದೆ ಎಂದವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಜೂನ್ 20ರವರೆಗೆ ಸ್ಪೈಸ್ ಜೆಟ್ ಸಂಸ್ಥೆಗೆ 30.73 ಕೋಟಿ ರೂ. ನಷ್ಟ, ಮೇ 31ರವರೆಗೆ ಇಂಡಿಗೋ ಸಂಸ್ಥೆಗೆ 25.1 ಕೋಟಿ ರೂ. ನಷ್ಟ, ಜೂನ್ 20ರವರೆಗೆ ಗೋ ಏರ್ ಸಂಸ್ಥೆಗೆ 2.1 ಕೋಟಿ ರೂ. ನಷ್ಟ, ಏರ್‌ಇಂಡಿಯಾಗೆ 491 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅವರು ಅಂಕಿ ಅಂಶ ಸಹಿತ ವಿವರಿಸಿದ್ದಾರೆ.

ಭಾರತೀಯ ವಾಯುಪಡೆಯ ವಿಮಾನಗಳು ಬಾಲಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ದಕ್ಷಿಣ ಪಾಕಿಸ್ತಾನದ ಮೂಲಕ ಸಾಗಿ ಹೋಗುವ 11 ವಾಯುಮಾರ್ಗಗಳಲ್ಲಿ ಕೇವಲ 2ನ್ನು ಮಾತ್ರ ಮುಕ್ತವಾಗಿರಿಸಿದೆ. ಭಾರತವೂ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರೂ ಮೇ 31ರಂದು ನಿಷೇಧವನ್ನು ತೆರವುಗೊಳಿಸಿದೆ. ಇದರಿಂದ ಉಪಖಂಡದ ಮೇಲಿನಿಂದ ಹಾದುಹೋಗುವ ನೂರಾರು ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿದ್ದು, ಉತ್ತರ ಭಾರತದಿಂದ ಪಶ್ಚಿಮಾಭಿಮುಖವಾಗಿ ಸಂಚರಿಸುವ ವಿಮಾನಗಳ ಮೇಲೆ ಅತ್ಯಧಿಕ ಪರಿಣಾಮವಾಗಿದೆ. ವಿಮಾನಪ್ರಯಾಣದ ಅವಧಿ ಹೆಚ್ಚುವುದರ ಜೊತೆಗೆ ವಿಮಾನದ ಇಂಧನವೂ ಹೆಚ್ಚು ಖರ್ಚಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News