×
Ad

ಆರ್ಥಿಕ ಸಮೀಕ್ಷೆಯಲ್ಲಿ ಹಿಂದೂಯಿಸಂ, ಪ್ರವಾದಿ, ಕ್ರೈಸ್ತರ ಸಂದೇಶ !

Update: 2019-07-05 11:28 IST
ಕೃಷ್ಣಮೂರ್ತಿ ಸುಬ್ರಹ್ಮಣ್ಯನ್

ಹೊಸದಿಲ್ಲಿ : ಗುರುವಾರ ಸಂಸತ್ತಿನಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರು ಸಿದ್ಧಪಡಿಸಿರುವ ಭಾರತದ ಆರ್ಥಿಕ ಸಮೀಕ್ಷೆ 2019 ವರದಿ ದೇಶದ ಪ್ರಸಕ್ತ ಆರ್ಥಿಕ ಸ್ಥಿತಿಗತಿಯ ಜತೆಗೆ  ಹೊಸ ಆರ್ಥಿಕ ಸುಧಾರಣೆಗಳ ಅಗತ್ಯದತ್ತವೂ ಬೆಳಕು ಚೆಲ್ಲಿದ್ದು ಒಂದು ವಿಚಾರವಾದರೆ, ಪತ್ರಕರ್ತೆ ಪೂಜಾ ಮೆಹ್ರಾ ಅವರು ಮಾಡಿದ ಒಂದು ಟ್ವೀಟ್ ಸಮೀಕ್ಷಾ ವರದಿಯಲ್ಲಿದ್ದ ಇನ್ನೊಂದು ವಿಚಾರದತ್ತ ಬೆಳಕು ಚೆಲ್ಲಿದ್ದು ಅದೀಗ ವೈರಲ್ ಆಗಿದೆ.

ಸಮೀಕ್ಷಾ ವರದಿಯ ಪುಟ 54ರತ್ತ ಪೂಜಾ ಟ್ವಿಟ್ಟರಿಗರ ಗಮನ ಸೆಳೆದಿದ್ದು ಈ ನಿರ್ದಿಷ್ಟ ಪುಟದಲ್ಲಿ ತೆರಿಗೆ ವಂಚನೆ ಕುರಿತಾದ ವಿಚಾರಗಳಿದ್ದವು. ಅದರ ಎರಡು ಪ್ಯಾರಾಗಳಲ್ಲಿ ತೆರಿಗೆ ವಂಚನೆಯ ಬಗ್ಗೆ ಬರೆಯುವಾಗ ಹಿಂದೂಯಿಸಂ, ಇಸ್ಲಾಂ ಹಾಗೂ ಕ್ರೈಸ್ತ ಧರ್ಮದ ಪವಿತ್ರ ಗ್ರಂಥಗಳ ಕೆಲವೊಂದು ವಿಚಾರಗಳನ್ನೂ ಉಲ್ಲೇಖಿಸಲಾಗಿತ್ತು.

ಸಮೀಕ್ಷೆಯ ಒಂದು ವಿಭಾಗ ''ಪಾಲಿಸಿ ಫಾರ್ ಹೋಮೋ ಸೇಪಿಯನ್ಸ್, ನಾಟ್ ಹೋಮೋ ಇಕನಾಮಿಕಸ್ : ಲಿವರೇಜಿಂಗ್ ದಿ ಬಿಹೇವ್ಯರಲ್ ಇಕನಾಮಿಕ್ಸ್ ಆಫ್ ನಡ್ಜ್' ಇದರಲ್ಲಿ ''ತೆರಿಗೆ ವಂಚನೆ, ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದಿರುವುದು ಹಾಗೂ ಧಾರ್ಮಿಕ ಬಾಧ್ಯತೆಯ ಸಿದ್ಧಾಂತ (ಡಾಕ್ಟ್ರಿನ್ ಆಫ್ ಪಾಯಸ್ ಒಬ್ಲಿಗೇಶನ್)  ಎಂಬ ಶೀರ್ಷಿಕೆಯಡಿಯಲ್ಲಿ ಹೀಗೆ ಬರೆಯಲಾಗಿದೆ.

''ಹಿಂದೂ ಧರ್ಮದಲ್ಲಿ ಸಾಲ ಮರು ಪಾವತಿಸದೇ ಇರುವುದು ಒಂದು ಪಾಪ ಹಾಗೂ ಅಪರಾಧವೂ ಆಗಿದೆ. ಧರ್ಮಗ್ರಂಥಗಳ ಪ್ರಕಾರ ಒಬ್ಬ ವ್ಯಕ್ತಿ ಸಾಲಗಳನ್ನು ಪಾವತಿಸದೇ ಇದ್ದಲ್ಲಿ ಹಾಗೂ ಆತ ಸಾಲಗಾರನಾಗಿ ಸತ್ತಲ್ಲಿ ಆತನ ಆತ್ಮ ಕೆಟ್ಟ ಪರಿಣಾಮಗಳನ್ನೆದುರಿಸಬೇಕಾಗುತ್ತದೆ. ಆದುದರಿಂದ ಆತನನ್ನು ಇಂತಹ ಕೆಟ್ಟ ಪರಿಣಾಮಗಳಿಂದ ರಕ್ಷಿಸುವ ಕರ್ತವ್ಯ ಮಕ್ಕಳದ್ದಾಗಿದೆ. ದಿವಂಗತ  ಹೆತ್ತವರ ಸಾಲಗಳನ್ನು ಮರುಪಾವತಿಸುವ  ಮಕ್ಕಳ ಕರ್ತವ್ಯ ಹಾಗೂ ಬದ್ಧತೆ  ಒಂದು ವಿಶೇಷ ಸಿದ್ಧಾಂತ ''ದಿ ಡಾಕ್ಟ್ರಿನ್ ಆಫ್ ಪಾಯಸ್ ಆಬ್ಲಿಗೇಶನ್'' ಆಧರಿತವಾಗಿದೆ.

ಇಸ್ಲಾಂನಲ್ಲಿ  ಪ್ರವಾದಿ ಮುಹಮ್ಮದ್ ಅವರು ಅಲ್ಲಾಹ್ ಪಾಪ ಹಾಗೂ ಸಾಲದ ಕೂಪದಿಂದ ನಿಮ್ಮಿಂದ ರಕ್ಷಣೆ ಕೋರುತ್ತೇನೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ತನ್ನ ಸಾಲ ತೀರಿಸದ ತನಕ ಆತ ಸ್ವರ್ಗ ಪ್ರವೇಶಿಸಲು ಸಾಧ್ಯವಿಲ್ಲ. ಆತನ ಎಲ್ಲಾ  ಸಂಪತ್ತನ್ನು ಸಾಲ ತೀರಿಸಲು ಬಳಸಬೇಕು ಹಾಗೂ ಅದು ಸಾಲದಾದರೆ ಆತನ ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ ಉತ್ತರಾಧಿಕಾರಿಗಳು ಆತನ ಸಾಲವನ್ನು ಸ್ವಯಂ ಪ್ರೇರಣೆಯಿಂದ ತೀರಿಸಬೇಕು ಎಂದು ಹೇಳಿದ್ದಾರೆ.

ಬೈಬಲ್ ಪ್ರಕಾರ  ಒಬ್ಬರನ್ನೊಬ್ಬರು ಸದಾ ಪ್ರೀತಿಸುವ ನಿರಂತರ ಸಾಲದ ಹೊರತಾಗಿ ಬೇರೆ ಯಾವುದೇ ಸಾಲ ಬಾಕಿಯಿರಬಾರದು. ಆದುದರಿಂದ ಜೀವಂತವಿರುವಾಗಲೇ ಸಾಲ ಮರು ಪಾವತಿಸಬೇಕೆಂದು ಎಲ್ಲಾ ಧರ್ಮ ಗ್ರಂಥಗಳೂ ಹೇಳಿವೆ.''

ಪೂಜಾ ಮಿಶ್ರಾ ಅವರ ಟ್ವೀಟ್ ಹಾಗೂ ಆರ್ಥಿಕ ಸಮೀಕ್ಷೆಯ ಈ ನಿರ್ದಿಷ್ಟ ಭಾಗವನ್ನು ಓದಿದ ಟ್ವಿಟ್ಟರಿಗರು ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾರೆ.

''ನಾನು ನಾಸ್ತಿಕನಾಗಿದ್ದರೆ ?  ನಾನು ಇಂತಹ ನಂಬಿಕೆಗಳನ್ನು ಹೊಂದಿರದೇ ಇರುವುದರಿಂದ ತೆರಿಗೆ ಪಾವತಿಸುವುದನ್ನು ನಿಲ್ಲಿಸಬೇಕೇ ?'' ಎಂದು ಒಬ್ಬರು ಪ್ರಶ್ನಿಸಿದರೆ ಧರ್ಮಗ್ರಂಥಗಳನ್ನೇಕೆ ಆರ್ಥಿಕ ಸಮೀಕ್ಷೆ ಉಲ್ಲೇಖಿಸಿದೆ ?,'' ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

''ಮಕ್ಕಳಿಲ್ಲದವರ ಸಾಲ ಮರು ಪಾವತಿ ಯಾರು ಮಾಡುತ್ತಾರೆ ?'' ''ಧರ್ಮವೇ ಇಲ್ಲದ ನನ್ನಂತಹವರು ತೆರಿಗೆ  ಪಾವತಿಸಬೇಕೇ ?,'' ಇದೇನು ಆರ್ಥಿಕ ಸಮೀಕ್ಷೆಯೇ ಅಥವಾ ಧಾರ್ಮಿಕ ಪ್ರವಚನವೇ ?'' ''ಇನ್ನು ತೆರಿಗೆ ಪಾವತಿಸದವರಿಗೆ ಶಾಪವೇ ಬಾಕಿ,'' ಎಂಬಿತ್ಯಾದಿ ಸ್ವಾರಸ್ಯಕರ ಪ್ರತಿಕ್ರಿಯೆಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News