ಕಾಶ್ಮೀರಿ ಪಂಡಿತರ ವಾಪಸಾತಿಗಾಗಿ ಎಲ್ಲರೊಡನೆ ಶ್ರಮಿಸುತ್ತೇವೆ: ಹುರಿಯತ್

Update: 2019-07-05 09:06 GMT

ಶ್ರೀನಗರ, ಜು.5: ಕಾಶ್ಮೀರ ಕಣಿವೆಯಿಂದ ಸಾವಿರಾರು ಸಂಖ್ಯೆಯಲ್ಲಿ ವಲಸೆ ಹೋದ ಕಾಶ್ಮೀರಿ ಪಂಡಿತರ ವಾಪಸಾತಿಗೆ ಅನುವು ಮಾಡಿ ಕೊಡುವ ನಿಟ್ಟಿನಲ್ಲಿ ಮಿರ್ವಾಯಿಝ್ ಉಮರ್ ಫಾರೂಕ್ ನೇತೃತ್ವದ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಹಾಗೂ ಕಾಶ್ಮೀರಿ ಪಂಡಿತರ ನಾಲ್ಕು ಮಂದಿ ಸದಸ್ಯರ ತಂಡ ಕೈಜೋಡಿಸಿವೆ.

ಈ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಲು ಹುರಿಯತ್, ಕಾಶ್ಮೀರಿ ನಾಗರಿಕರು, ವಲಸಿಗ ಕಾಶ್ಮೀರಿ ಪಂಡಿತರು ಹಾಗೂ ಕಾಶ್ಮೀರ ಕಣಿವೆಯಲ್ಲಿ ಈಗಲೂ ವಾಸವಾಗಿರುವ ಪಂಡಿತರನ್ನೊಳಗೊಂಡ  ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಫಾರೂಕ್ ಹೇಳಿದ್ದಾರೆ. “ಪರಸ್ಪರ ನಂಬಿಕೆ ಬೆಳೆಯುವಂತಾಗಲು ನಾವು ಎಲ್ಲರ ಜತೆ ಕೆಲಸ ಮಾಡಲು ನಿರ್ಧರಿಸಿದ್ದೇವೆ. ವಿವಿಧ ಸಮುದಾಯಗಳ ನಡುವೆ ಸಂವಹನ ಅಗತ್ಯ” ಎಂದವರು ಹೇಳಿದ್ದಾರೆ.

ಸತೀಶ್ ಮಹಲ್ದಾರ್ ಅವರ ನೇತೃತ್ವದ ವಲಸಿಗ ಪಂಡಿತರ ನಿಯೋಗವೊಂದು ಹುರಿಯತ್ ಕಾನ್ಫರೆನ್ಸ್ ನಾಯಕನನ್ನು ಗುರುವಾರ ಸಂಘಟನೆಯ ರಾಜಬಾಘ್ ಕಚೇರಿಯಲ್ಲಿ ಭೇಟಿಯಾಗಿ ಸುಮಾರು ಎರಡು ಗಂಟೆಗಳ ತನಕ ಚರ್ಚಿಸಿದ ನಂತರ ಈ ಸಮಿತಿ ರಚಿಸುವ ನಿರ್ಧಾರಕ್ಕೆ ಬರಲಾಯಿತು. ಸ್ಥಳೀಯ ಕಾಶ್ಮೀರಿ ಪಂಡಿತರಾದ ಸಂಪತ್ ಪ್ರಕಾಶ್ ಕೂಡ ಈ ಸಂದರ್ಭ ಉಪಸ್ಥಿತರಿದ್ದರು.

ತಾವು ಈ ಸಮಿತಿಯ ಭಾಗವಾಗುವುದಾಗಿ ಮಹಲ್ದಾರ್ ಹೇಳಿದ್ದಾರೆ. ಈ ಸರಕಾರೇತರ ಪ್ರಯತ್ನದ ಕುರಿತಂತೆ ಪ್ರತಿಕ್ರಿಯಿಸಲು ಸರಕಾರಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಸರಕಾರಿ ಅಂಕಿಅಂಶಗಳ ಪ್ರಕಾರ 90ರ ದಶಕದಲ್ಲಿ ಕನಿಷ್ಠ 1,54,080 ಜನರು ಕಾಶ್ಮೀರ ಕಣಿವೆಯಿಂದ ವಲಸೆ ಹೋಗಿ ಬೇರೆಡೆ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News