ಕುದುರೆಯ ಎದುರು ಗಾಡಿ ಕಟ್ಟಲು ಸಾಧ್ಯವಿಲ್ಲ: ಆಧಾರ್ ಟೀಕಿಸಿದ ಮಹುವಾ ಮೊಯಿತ್ರ ಭಾಷಣದ ವಿಡಿಯೋ ವೈರಲ್

Update: 2019-07-05 09:12 GMT

ಹೊಸದಿಲ್ಲಿ, ಜು.5: ಆಧಾರ್ ಮಸೂದೆ 2016 ಕುರಿತಂತೆ ತಮ್ಮ ವಿರೋಧ ವ್ಯಕ್ತಪಡಿಸಿ ಲೋಕಸಭೆಯಲ್ಲಿ ಮಾತನಾಡಿದ ತೃಣಮೂಲ ಸಂಸದೆ ಮಹುವಾ ಮೊಯಿತ್ರ ಈ ಮಸೂದೆ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುತ್ತದೆ ಹಾಗೂ ಪಾರದರ್ಶಕತೆಯ ಕೊರತೆ ಎದುರಿಸುತ್ತಿದೆ ಎಂದಿದ್ದಾರೆ.

ಮಸೂದೆಯ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೊಯಿತ್ರ, “ನನಗೆ ಸ್ಪಷ್ಟತೆಯಿರದ ಹಾಗೂ ಪಾರದರ್ಶಕತೆಯಿಂದ ಕೂಡಿರದ ಮಸೂದೆಯೊಂದರ ಬಗ್ಗೆ ಚರ್ಚೆ ನಡೆಸಿ ಅದನ್ನು ಅನುಮೋದಿಸುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

“ವ್ಯಕ್ತಿಯೊಬ್ಬನ ಖಾಸಗಿ ಮಾಹಿತಿಯ ಕೇಂದ್ರ ಸ್ಥಾನಕ್ಕೇ ಈ ಮಸೂದೆ ಹೊಡೆತ ನೀಡಿದೆ. ಇದನ್ನೇ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಲು ಪ್ರಯತ್ನಿಸಿದೆ. ಈ ತಿದ್ದುಪಡಿ ಮಸೂದೆಯಲ್ಲಿ ಮೂರು ಸಮಸ್ಯಾತ್ಮಕ ಅಂಶಗಳಿವೆ'' ಎಂದು ಅವರು ಹೇಳಿದರು. ಆಧಾರ್ ಬಡವರಿಗೆ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆಯೇ ಹೊರತು ದತ್ತಾಂಶ ಪೂರೈಕೆಗಲ್ಲ ಎಂದು ಅವರು ಹೇಳಿದರು.

“ಆಧಾರ್ ಖಾಸಗಿ ಸಂಸ್ಥೆಗಳಿಗೆ ಮಾಹಿತಿಯೊದಗಿಸುವ ಸಾಧನವಾಗಿ ಬಿಟ್ಟಿದೆ. ನನ್ನ ಬ್ಯಾಂಕ್ ಹಾಗೂ ನನ್ನ ಟೆಲಿಕಾಂ ಸೇವಾ ಪೂರೈಕೆದಾರನಿಗೆ ನನ್ನ ಬಯೋಮೆಟ್ರಿಕ್ ಮಾಹಿತಿ ನೀಡುವುದು ಅಗತ್ಯವಿಲ್ಲದೇ ಇದ್ದರೂ ಅದನ್ನು ಪಡೆಯುತ್ತಾರೆ. ಆಧಾರ್ ವ್ಯವಸ್ಥೆ ವಿಫಲವಾದರೆ ಪರಿಹಾರಕ್ಕೆ ಬೇರೆ ಉಪಾಯಗಳಿವೆ ಎಂದು ಹೇಳಲಾಗುತ್ತಿದೆ. ಆದರೆ ಅವೇನೆಂದು ಗೊತ್ತಿಲ್ಲ'' ಎಂದು ಅವರು ಹೇಳಿದರು.

ಮಸೂದೆಯ ಸೆಕ್ಷನ್ 5ರ ಬಗ್ಗೆ ಮಾತನಾಡಿದ ಅವರು, “ದತ್ತಾಂಶ ಸಂರಕ್ಷಣಾ ಕಾಯಿದೆ ಇರದ ಹೊರತು ನನ್ನ ಮಾಹಿತಿಯನ್ನು ಖಾಸಗಿ ಸಂಸ್ಥೆಗೆ ನೀಡಲು ಹೇಗೆ ಹೇಳಬಹುದು. ನೀವು ಕುದುರೆಯ ಎದುರು ಗಾಡಿ ಕಟ್ಟಲು ಸಾಧ್ಯವಿಲ್ಲ'' ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News