ದೇಶದ್ರೋಹ ಪ್ರಕರಣ: ಎಂಡಿಎಂಕೆ ನಾಯಕ ವೈಕೋಗೆ ಒಂದು ವರ್ಷ ಸಜೆ

Update: 2019-07-05 09:16 GMT

ಚೆನ್ನೈ, ಜು.5: ವೈಕೋ ಎಂದೇ ಜನಪ್ರಿಯರಾಗಿರುವ ತಮಿಳಿನಾಡಿನ ಎಂಡಿಎಂಕೆ ನಾಯಕ ವಿ ಗೋಪಾಲಸ್ವಾಮಿ ಅವರಿಗೆ ಚೆನ್ನೈ ನ್ಯಾಯಾಲಯವೊಂದು ದೇಶದ್ರೋಹ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ವೈಕೋ ಅವರ ಅಪೀಲು ಮಾನ್ಯ ಮಾಡಿರುವ ನ್ಯಾಯಾಲಯ ಅವರ ಶಿಕ್ಷೆ ಜಾರಿಗೆ ಒಂದು ತಿಂಗಳ ತಡೆಯಾಜ್ಞೆಯನ್ನೂ ವಿಧಿಸಿದೆ.

ವೈಕೋ ಬರೆದಿದ್ದ ‘ನಾನ್ ಕುಟ್ರಮ್ ಸಾತುಗಿರೆನ್’ ಎಂಬ ಪುಸ್ತಕ ಬಿಡುಗಡೆ ಸಮಾರಂಭ 2009ರಲ್ಲಿ  ಅವರು ಮಾತನಾಡುತ್ತಾ, “ಶ್ರೀಲಂಕಾದಲ್ಲಿ ಎಲ್‍ಟಿಟಿಇ ವಿರುದ್ಧದ ಯುದ್ಧ ನಿಲ್ಲದೇ ಇದ್ದರೆ ಭಾರತ ಒಂದು ದೇಶವಾಗಿ ಉಳಿಯುವುದಿಲ್ಲ'' ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಡಿಎಂಕೆ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತಲ್ಲದೆ, ಅವರು ಭಾರತದ ಸಾರ್ವಭೌಮತೆಯ ವಿರುದ್ಧ ಮಾತನಾಡಿದ್ದಾರೆಂದು ಆರೋಪಿಸಿತ್ತು.

ವಿಪರ್ಯಾಸವೆಂದರೆ ವೈಕೋ ಅವರನ್ನು ಈ ವಾರ ತಮಿಳುನಾಡಿನ ಡಿಎಂಕೆ ಮೈತ್ರಿಕೂಟ ತನ್ನ ರಾಜ್ಯಸಭಾ ಅಭ್ಯರ್ಥಿಯನ್ನಾಗಿ  ಹೆಸರಿಸಿತ್ತು ಹಾಗೂ ಅವರು ನಾಳೆ ತಮ್ಮ ನಾಮಪತ್ರ ಸಲ್ಲಿಸಲಿದ್ದರು. ಅವರು ರಾಜ್ಯಸಭೆಗೆ ಆಯ್ಕೆಯಾದಲ್ಲಿ 15 ವರ್ಷಗಳ ಅಂತರದ ನಂತರ ರಾಜ್ಯಸಭೆ ಪ್ರವೇಶಿಸಿದಂತಾಗುತ್ತದೆ. ಲೋಕಸಭಾ ಚುನಾವಣೆ ವೇಳೆ ಎಂಡಿಎಂಕೆ ಜತೆ ಡಿಎಂಕೆ ಮೈತ್ರಿ ಸಾಧಿಸಿತ್ತು ಹಾಗೂ ಈ ಮೈತ್ರಿ ಒಪ್ಪಂದದಂತೆ ಈ ರಾಜ್ಯಸಭಾ ಸೀಟನ್ನು ವೈಕೋ ಅವರಿಗೆ ಆಫರ್ ಮಾಡಲಾಗಿತ್ತು.

ಡಿಎಂಕೆ ಜತೆಗಿದ್ದಾಗ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ವೈಕೋ ಎರಡು ಬಾರಿ ಶಿವಕಾಶಿಯಿಂದ ಆಯ್ಕೆಯಾಗಿದ್ದರು. ವಕೀಲರಾಗಿರುವ ಅವರು ಇಂಗ್ಲಿಷ್ ಹಾಗೂ ತಮಿಳಿನಲ್ಲಿ ಉತ್ತಮ ವಾಗ್ಮಿಯೂ ಆಗಿದ್ದಾರೆ. ನಿಷೇಧಿತ ಎಲ್‍ಟಿಟಿಇ ಬೆಂಬಲಿಸಿ ಅವರು ಮಾಡಿದ ವಿವಾದಿತ ಭಾಷಣದ ಹಿನ್ನೆಲೆಯಲ್ಲಿ 2002ರಲ್ಲಿ ಅವರ ವಿರುದ್ಧ  ಅಂದಿನ ಜಯಲಲಿತಾ ಸರಕಾರ ಉಗ್ರವಾದ ನಿಗ್ರಹ ಕಾಯಿದೆಯನ್ವಯ ಪ್ರಕರಣ ದಾಖಲಿಸಿತ್ತು. ಅವರ ವಿರುದ್ಧದ ಪ್ರಕರಣ 2014ರಲ್ಲಿ ವಾಪಸ್ ಪಡೆಯುವ ತನಕ ಒಂದು ವರ್ಷ ಅವರು ವೆಲ್ಲೂರ್ ಕಾರಾಗೃಹದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News