ಸರಕಾರಿ ಬೊಕ್ಕಸ ಸೇರುವ ಪ್ರತಿ ರೂಪಾಯಿಗಳಲ್ಲಿ ತೆರಿಗೆಗಳ ಕೊಡುಗೆ ಎಷ್ಟು ಗೊತ್ತಾ?

Update: 2019-07-05 16:28 GMT

ಹೊಸದಿಲ್ಲಿ,ಜು.5: ಸರಕಾರದ ಬೊಕ್ಕಸವನ್ನು ಸೇರುವ ಪ್ರತಿ ಒಂದು ರೂಪಾಯಿಯಲ್ಲಿ 68 ಪೈಸೆ ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಬರಲಿದ್ದರೆ,ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯಗಳ ಪಾಲು ಒಟ್ಟು ವೆಚ್ಚದಲ್ಲಿ ಶೇ.23ರಷ್ಟನ್ನು ಕಬಳಿಸಲಿದ್ದು,ಇದು ವೆಚ್ಚ ಶೀರ್ಷಿಕೆಯಡಿ ಏಕೈಕ ದೊಡ್ಡ ಮೊತ್ತವಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಮುಂಗಡಪತ್ರದಂತೆ ಪ್ರತಿ ಒಂದು ರೂ.ಆದಾಯದಲ್ಲಿ 19 ಪೈಸೆ ಜಿಎಸ್‌ಟಿಯಿಂದ ಬರುತ್ತದೆ. ಕಾರ್ಪೊರೇಟ್ ತೆರಿಗೆಯು 21 ಪೈಸೆಗಳನ್ನು ನೀಡಲಿದ್ದು, ಇದು ಏಕೈಕ ಬೃಹತ್ ಆದಾಯ ಮೂಲವಾಗಿದೆ. ಸಾಲಗಳು ಮತ್ತು ಇತರ ಹೊಣೆಗಾರಿಕೆಗಳಿಂದ ಸಂಗ್ರಹವು 20 ಪೈಸೆಗಳಾಗಿದ್ದರೆ ಆದಾಯ ತೆರಿಗೆಯ ಮೂಲಕ 16 ಪೈಸೆ ದೊರೆಯಲಿದೆ.

ಪ್ರತಿ ಒಂದು ರೂ.ಸಂಗ್ರಹದಲ್ಲಿ ಹೂಡಿಕೆ ಹಿಂದೆಗೆತದಂತಹ ತೆರಿಗೆಯೇತರ ಆದಾಯಗಳ ಮೂಲಕ 9 ಪೈಸೆ,ಕೇಂದ್ರ ಅಬಕಾರಿ ಸುಂಕದಿಂದ 8 ಪೈಸೆ,ಕಸ್ಟಮ್ಸ್‌ನಿಂದ 4 ಪೈಸೆ ಮತ್ತು ಸಾಲವಲ್ಲದ ಬಂಡವಾಳ ಸ್ವೀಕೃತಿಗಳ ಮೂಲಕ 3 ಪೈಸೆಯನ್ನು ಗಳಿಸಲು ಸರಕಾರವು ಉದ್ದೇಶಿಸಿದೆ.

ವೆಚ್ಚದ ಪಟ್ಟಿಯಲ್ಲಿ ಪ್ರತಿ ಒಂದು ರೂ.ಯಲ್ಲಿ 23 ಪೈಸೆಗಳ ರಾಜ್ಯಗಳ ತೆರಿಗೆ ಮತ್ತು ಸುಂಕಗಳ ಸಿಂಹಪಾಲಿನ ನಂತರ 18 ಪೈಸೆ ಬಡ್ಡಿ ಪಾವತಿಗೆ ಹೋಗಲಿದೆ.

ರಕ್ಷಣೆಗೆ ನಿಗದಿಯಾಗಿರುವ 9 ಪೈಸೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಕೇಂದ್ರೀಯ ವಿಭಾಗ ಯೋಜನೆಗಳಿಗೆ 13 ಪೈಸೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 9 ಪೈಸೆ ವೆಚ್ಚವಾಗಲಿದೆ.

ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳ ವೆಚ್ಚಕ್ಕಾಗಿ 7ಪೈಸೆ,ಸಬ್ಸಿಡಿಗಳಿಗೆ 8 ಪೈಸೆ ಮತ್ತು ಪಿಂಚಣಿಗಳಿಗೆ 5 ಪೈಸೆಯನ್ನು ನಿಗದಿಗೊಳಿಸಲಾಗಿದೆ. ಸರಕಾರವು ಇತರ ವೆಚ್ಚಗಳಿಗಾಗಿ ಪ್ರತಿ ಒಂದು ರೂ.ಯಲ್ಲಿ 8 ಪೈಸೆಗಳನ್ನು ವ್ಯಯಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News