ಬಜೆಟ್: ಅಲ್ಪಸಂಖ್ಯಾತರಿಗೆ ಯುಪಿಎಸ್‌ಸಿ ಉಚಿತ ತರಬೇತಿಗೆ ಅನುದಾನ ಹೆಚ್ಚಳ

Update: 2019-07-05 16:41 GMT

ಹೊಸದಿಲ್ಲಿ, ಜು.5: ಯುಪಿಎಸ್‌ಸಿ (ಕೇಂದ್ರ ನಾಗರಿಕ ಸೇವಾ ಆಯೋಗ) ಪರೀಕ್ಷೆ ಬರೆಯುವ ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಲಾಗುವ ಅನುದಾನವನ್ನು ಕೇಂದ್ರ ಸರಕಾರದ ಬಜೆಟ್‌ನಲ್ಲಿ ಗಮನಾರ್ಹವಾಗಿ ಹೆಚ್ಚಳ ಮಾಡಲಾಗಿದೆ.

ಐಎಎಸ್ (ಭಾರತೀಯ ಆಡಳಿತ ಸೇವೆ) ಹಾಗೂ ಐಪಿಎಸ್ (ಭಾರತೀಯ ಪೊಲೀಸ್ ಸೇವೆ )ಗೆ ನೇಮಕ ಮಾಡಿಕೊಳ್ಳಲು ಯುಪಿಎಸ್‌ಸಿ ಪರೀಕ್ಷೆ ನಡೆಸಲಾಗುತ್ತಿದೆ. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಒದಗಿಸಲು ಹಾಗೂ ಸಬ್ಸಿಡಿ ನೀಡಲು (ಯುಪಿಎಸ್‌ಸಿ, ಎಸ್‌ಎಸ್‌ಸಿ, ಎಸ್‌ಪಿಎಸ್ಸಿ ಇತ್ಯಾದಿಗಳು ನಡೆಸುವ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಯೋಜನೆಯಡಿ) ಒದಗಿಸುವ ಅನುದಾನವನ್ನು 8 ಕೋಟಿ ರೂ.ಯಿಂದ 20 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತ ಇಲಾಖೆಗೆ ಈ ಬಾರಿ ಬಜೆಟ್ ಅನುದಾನ 4,534 ಕೋಟಿ ರೂ.ಯಿಂದ 4,599 ಕೋಟಿ ರೂ.ಗೆ ಹೆಚ್ಚಿದೆ.

ಆದರೆ ಇದೇ ವೇಳೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್‌ನ ಅನುದಾನ ಕಡಿಮೆ ಮಾಡಲಾಗಿದೆ. ಮುಸ್ಲಿಂ ಸಮುದಾಯದ ಸ್ಥಿತಿಯನ್ನು ಶಿಕ್ಷಣದ ಮೂಲಕ ಸುಧಾರಿಸುವ ಪ್ರಯತ್ನಕ್ಕೆ ನೆರವಾಗಲು ಗಮನ ನೀಡುವುದಾಗಿ ಈ ಹಿಂದೆ ಕೇಂದ್ರ ಸರಕಾರ ಹೇಳಿತ್ತು. ಸರಕಾರ ಹಜ್ ಸಬ್ಸಿಡಿಯನ್ನು ರದ್ದುಗೊಳಿಸಿದಾಗ ಹೇಳಿಕೆ ನೀಡಿದ್ದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಈ ನಿಧಿಯನ್ನು ಮುಸ್ಲಿಂ ಸಮುದಾಯದ ಶಿಕ್ಷಣಕ್ಕೆ ಬಳಸುವುದಾಗಿ ತಿಳಿಸಿದ್ದರು. ಘನತೆಯಿಂದ ಮತ್ತು ತುಷ್ಟೀಕರಣವಿಲ್ಲದೆ ಅಲ್ಪಸಂಖ್ಯಾತರನ್ನು ಸಶಕ್ತಗೊಳಿಸುವ ಮೋದಿ ಸರಕಾರದ ಪ್ರಯತ್ನಗಳಿಗೆ ಇದು ಪುರಾವೆಯಾಗಿದೆ ಎಂದವರು ಹೇಳಿದ್ದರು.

 ಮುಸ್ಲಿಂ ಸಮುದಾಯವನ್ನು ಶಿಕ್ಷಣದ ಮೂಲಕ ಸಬಲೀಕರಣಗೊಳಿಸುವ ಕಾರ್ಯಕ್ಕೆ ಮೀಸಲಿರಿಸಿದ್ದ ನಿಧಿಯನ್ನು ಕಳೆದ ವರ್ಷ 2,451 ಕೋಟಿ ರೂ.ನಿಂದ 2,362 ಕೋಟಿ ರೂ.ಗೆ ಇಳಿಸಲಾಗಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ಬಳಿಕದ ಸ್ಕಾಲರ್‌ಶಿಪ್ ಅನುದಾನ ಕಳೆದ ವರ್ಷ ಕ್ರಮವಾಗಿ 1,296 ಕೋಟಿ ರೂ. ಹಾಗೂ 500 ಕೋಟಿ ರೂ. ಇದ್ದರೆ, ಈ ಬಾರಿ ಅನುಕ್ರಮವಾಗಿ 1,220 ಕೋಟಿ ರೂ. ಹಾಗೂ 496 ಕೋಟಿ ರೂ.ಗೆ ಇಳಿಕೆಯಾಗಿದೆ. ಈ ಬಗ್ಗೆ ವಿವರಣೆ ನೀಡಿದ್ದ ಸಚಿವಾಲಯದ ಅಧಿಕಾರಿಯೊಬ್ಬರು, ಇದು ಅಲ್ಪಪ್ರಮಾಣದ ಕಡಿತವಾಗಿದ್ದು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇರುವ ಇತರ ಯೋಜನೆಗಳಲ್ಲಿ ಏರಿಕೆ ಮಾಡಲಾಗಿದೆ . ಹಲವು ವರ್ಷಗಳಿಂದ ಇರುವ ಸ್ಕಾಲರ್‌ಶಿಪ್ ಯೋಜನೆಗೆ ಹೆಚ್ಚಿನ ಅನುದಾನದ ಅಗತ್ಯವಿಲ್ಲ. ಇದರ ಬದಲು ಯುಪಿಎಸ್‌ಸಿ ಪರೀಕ್ಷೆಗೆ ಹೆಚ್ಚಿನ ಮುಸ್ಲಿಮರು ಹಾಜರಾಗುವ ಬಗ್ಗೆ ಸರಕಾರ ಗಮನ ಹರಿಸಿದೆ ಎಂದಿದ್ದರು.

ಯುಪಿಎಸ್‌ಸಿ, ಎಸ್‌ಎಸ್‌ಸಿ, ಎಸ್‌ಪಿಎಸ್ಸಿಯ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ನಡೆಸುವ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ನೇರವಾಗಿ ಆರ್ಥಿಕ ನೆರವು ನೀಡುವ ಉದ್ದೇಶವಿದೆ. ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಇರುವುದು ಈ ಹಿಂದಿನಿಂದಲೂ ಚರ್ಚೆಯ ವಿಷಯವಾಗಿತ್ತು. ಆದರೆ ಕಳೆದ ಐದು ವರ್ಷದಲ್ಲಿ ಈ ಪ್ರವೃತ್ತಿ ಬದಲಾಗಿದೆ ಎಂದು ಮೋದಿ ಸರಕಾರ ಹೇಳುತ್ತಿದೆ.

  ಯುಪಿಎಸ್ಸಿ ಪರೀಕ್ಷೆ ಬರೆಯುವ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಹಜ್ ಭವನದಲ್ಲಿ ಸರಕಾರ ಉಚಿತ ತರಬೇತಿ ಆಯೋಜಿಸಲಿದೆ ಎಂದು ಕೇಂದ್ರ ಸಚಿವ ನಖ್ವಿ ಹೇಳಿದ್ದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, 2018ರಲ್ಲೂ ಇದು ಪುನರಾವರ್ತನೆಯಾಗಿದೆ.

2013, 14, 15 ಮತ್ತು 16ರಲ್ಲಿ ಈ ಸಂಖ್ಯೆ ಕ್ರಮವಾಗಿ 30, 34, 38 ಮತ್ತು 36 ಆಗಿತ್ತು. ಆದರೆ ಈ ವರ್ಷ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿರುವ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ 28ಕ್ಕೆ ಕುಸಿದಿದೆ. ನೇಮಕಗೊಂಡಿರುವ ಅಭ್ಯರ್ಥಿಗಳ ಸಂಖ್ಯೆ 980 ರಿಂದ 782ಕ್ಕೆ ಕುಸಿದಿದ್ದು ಇದಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News