ವೈದ್ಯಕೀಯ ಶಿಕ್ಷಣ: ರಾಜ್ಯದ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ ?

Update: 2019-07-05 17:42 GMT

ಮಂಗಳೂರು: ನೀಟ್ ಪ್ರವೇಶ ಪರೀಕ್ಷೆ ಬರೆದು, ಕರ್ನಾಟಕ ರಾಜ್ಯದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಿರುವ ಖಾಸಗಿ ಸೀಟುಗಳನ್ನು ಪಡೆಯಲು ಅರ್ಹರಾಗಿರುವ ರಾಜ್ಯದ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯ ಸರಕಾರವು ರೂಪಿಸಿರುವ ನಿಯಮಗಳಿಂದಾಗಿ ಸೀಟು ಪಡೆಯುವ ಅವಕಾಶಗಳಿಂದ ವಂಚಿತರಾಗಿ ಅನ್ಯಾಯಕ್ಕೊಳಗಾಗುತ್ತಿದ್ದಾರೆ ಎಂದು ಕರಿಯರ್ ಗೈಡೆನ್ಸ್ ಆ್ಯಂಡ್ ಇನ್ಫೊರ್ಮೇಶನ್ ಸೆಂಟರ್ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು ಐದು ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಹನ್ನೊಂದು ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಿವೆ. ಇವುಗಳ ಪೈಕಿ ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜು ಮತ್ತು ಬೆಂಗಳೂರಿನ ಸೈಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಕ್ರೈಸ್ತ ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳಾಗಿದ್ದು, ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜು, ಕಲಬುರ್ಗಿಯ ಖ್ವಾಜಾ ಬಂದೇ ನವಾಝ್ ವೈದ್ಯಕೀಯ ಕಾಲೇಜು ಮತ್ತು ಮಂಗಳೂರಿನ ಕಣಚೂರು ವೈದ್ಯಕೀಯ ಕಾಲೇಜು ಮುಸ್ಲಿಮ್ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಾಗಿವೆ.

ರಾಜ್ಯದ ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಒಟ್ಟು ಹನ್ನೊಂದು. ಇವುಗಳ ಪೈಕಿ ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ ಕಾಲೇಜು, ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜು ಮತ್ತು ಎ.ಜೆ. ವೈದ್ಯಕೀಯ ಕಾಲೇಜು ತುಳು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು. ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು, ಬೆಂಗಳೂರಿನ ದಿ ಆಕ್ಸ್‍ಫಾರ್ಡ್ ವೈದ್ಯಕೀಯ ಕಾಲೇಜು, ಈಸ್ಟ್ ಪಾಯಿಂಟ್ ವೈದ್ಯಕೀಯ ಕಾಲೇಜು ಮತ್ತು ವೈದೇಹಿ ವೈದ್ಯಕೀಯ ಕಾಲೇಜು ಹಾಗೂ ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು ತೆಲುಗು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳಾಗಿವೆ. ಬೆಂಗಳೂರಿನ ಎಂ.ವಿ.ಜೆ. ವೈದ್ಯಕೀಯ ಕಾಲೇಜು ಮತ್ತು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ತಮಿಳು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳಾಗಿದ್ದು, ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಕಾಲೇಜು ಕೊಡವ ಭಾಷಾ ಅಲ್ಪಸಂಖ್ಯಾತ ಕಾಲೇಜು ಎಂದು ಘೋಷಿಸಿವೆ.

ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 25 ಸರಕಾರಿ, ಶೇ. 55 ಖಾಸಗಿ, ಶೇ. 15 ಎನ್‍ಆರ್‍ಐ ಮತ್ತು ಶೇ. 5 ಇತರ ಕೋಟಾದ ಸೀಟುಗಳಿವೆ. ಅಲ್ಪಸಂಖ್ಯಾತೇತರ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 40 ಸರಕಾರಿ, ಶೇ. 40 ಖಾಸಗಿ, ಶೇ. 15 ಎನ್‍ಆರ್‍ಐ ಮತ್ತು ಶೇ. 5 ಇತರ ಕೋಟಾ ಸೀಟುಗಳಿವೆ. 

ದಂತ ವೈದ್ಯಕೀಯ ಕಾಲೇಜುಗಳು

ದಂತ ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ಮೂರು ಮುಸ್ಲಿಮ್ ಧಾರ್ಮಿಕ ಅಲ್ಪಸಂಖ್ಯಾತ (ವಿಜಯಪುರದ ಅಲ್ ಅಮೀನ್ ದಂತ ವೈದ್ಯಕೀಯ ಕಾಲೇಜು, ಕಲಬುರ್ಗಿಯ ಅಲ್ ಬದ್ರ್ ದಂತ ವೈದ್ಯಕೀಯ ಕಾಲೇಜು ಮತ್ತು ಮೈಸೂರಿನ ಫಾರೂಖಿಯಾ ದಂತ ವೈದ್ಯಕೀಯ ಕಾಲೇಜು) ಕಾಲೇಜುಗಳು ಹಾಗೂ ಮೂರು ತೆಲುಗು ಭಾಷಾ ಅಲ್ಪಸಂಖ್ಯಾತ ದಂತ ವೈದ್ಯಕೀಯ (ಕೋಲಾರದ ಕೆ.ಜಿ.ಎಫ್. ದಂತ ವೈದ್ಯಕೀಯ ಕಾಲೇಜು, ಶಿವಮೊಗ್ಗದ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು ಮತ್ತು ಬೆಂಗಳೂರಿನ ದಿ ಆಕ್ಸ್ ಫಾರ್ಡ್ ದಂತ ವೈದ್ಯಕೀಯ ಕಾಲೇಜು) ಕಾಲೇಜುಗಳಿವೆ. 

ಸೀಟು ಹಂಚಿಕೆ ಹೇಗಿದೆ ?

ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 25 ಸರಕಾರಿ ಮತ್ತು ಶೇ. 45 ಖಾಸಗಿ ಕೋಟಾದ ಸೀಟುಗಳು ಲಭ್ಯವಿದೆ. ಅಲ್ಪಸಂಖ್ಯಾತೇತರ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 35 ಸರಕಾರಿ ಮತ್ತು ಶೇ. 45 ಖಾಸಗಿ ಕೋಟಾದ ಸೀಟುಗಳಿವೆ. 

ಅಲ್ಪಸಂಖ್ಯಾತೇತರ ವೈದ್ಯಕೀಯ ಕಾಲೇಜಿನ ಶೇ. 40 ಖಾಸಗಿ ಸೀಟುಗಳು ಮತ್ತು ದಂತ ವೈದ್ಯಕೀಯ ಕಾಲೇಜಿನ ಶೇ. 45 ಖಾಸಗಿ ಸೀಟುಗಳ ಪೈಕಿ ಶೇ. 50 ಸೀಟುಗಳು ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದ್ದು, ಇವು ‘ಜನರಲ್ ಮೆರಿಟ್ ಪ್ರೈವೇಟ್’ ಸೀಟುಗಳಾಗಿವೆ. ಉಳಿದ ಶೇ. 50 ಸೀಟುಗಳು ‘ಓಪನ್’ ಸೀಟುಗಳಾಗಿವೆ. ಈ ಸೀಟುಗಳನ್ನು ಪಡೆಯಲು ಕರ್ನಾಟಕೇತರ ರಾಜ್ಯಗಳ ವಿದ್ಯಾರ್ಥಿಗಳೂ ಅರ್ಹರಾಗಿರುತ್ತಾರೆ.

ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿನ ಶೇ. 55 ಖಾಸಗಿ ಸೀಟುಗಳ ಪೈಕಿ ಶೇ. 66 ಸೀಟುಗಳು ಕರ್ನಾಟಕ ರಾಜ್ಯದ ಭಾಷಾ/ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದ್ದು, ಉಳಿದ ಶೇ. 34 ಸೀಟುಗಳ ಪೈಕಿ ಶೇ. 50 ಸೀಟುಗಳು ‘ಜನರಲ್ ಮೆರಿಟ್ ಪ್ರೈವೇಟ್’ ಸೀಟುಗಳಾಗಿವೆ. ರಾಜ್ಯದ ಅಲ್ಪಸಂಖ್ಯಾತೇತರ ವಿದ್ಯಾರ್ಥಿಗಳು ಈ ಸೀಟುಗಳನ್ನು ಪಡೆಯಬಹುದು. ಈ ಕೋಟಾದಲ್ಲಿ ಉಳಿದ ಶೇ. 50 ಸೀಟುಗಳು ‘ಓಪನ್’ ಸೀಟುಗಳಾಗಿವೆ. ಕರ್ನಾಟಕೇತರ ರಾಜ್ಯಗಳ ವಿದ್ಯಾರ್ಥಿಗಳು ಈ ಸೀಟುಗಳನ್ನು ಪಡೆಯಬಹುದಾಗಿದೆ.

ಈಗ ಏನಾಗಿದೆ?

ಈ ಶೈಕ್ಷಣಿಕ ವರ್ಷ (2019-20)ದಲ್ಲಿ ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸೀಟು ಹಂಚಿಕೆ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದ್ದು, ಎಲ್ಲ ಖಾಸಗಿ ಸೀಟುಗಳು ಕರ್ನಾಟಕ ರಾಜ್ಯದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿರಿಸಲಾಗಿದೆ. ಆದರೆ, ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳ ಖಾಸಗಿ ಸೀಟುಗಳನ್ನು ಕರ್ನಾಟಕೇತರ ರಾಜ್ಯಗಳ ವಿದ್ಯಾರ್ಥಿಗಳು ಎರಡನೇ ಆದ್ಯತೆಯಲ್ಲಿ ಪಡೆಯುವ ನಿಯಮವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. 

ಜೊತೆಗೆ, ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವರ್ಷಕ್ಕೆ ರೂ. 798015 (ಈ ವರ್ಷದ ಶುಲ್ಕ ವಿವರದಂತೆ) ಪಾವತಿಸಬೇಕಾದ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿನ ‘ಖಾಸಗಿ’ ಕೋಟಾದ, ಸೀಟುಗಳನ್ನು ಪಡೆಯಬೇಕಾದಲ್ಲಿ ಅವರು ಕನಿಷ್ಟ ಹತ್ತು ವರ್ಷ ಕರ್ನಾಟಕದಲ್ಲೇ ಓದಿರಬೇಕೆಂಬ ನಿಯಮವನ್ನು ವಿಧಿಸಲಾಗಿದೆ. ಕನಿಷ್ಟ ಏಳು ವರ್ಷ ರಾಜ್ಯದಲ್ಲಿ ಶಿಕ್ಷಣ ಪಡೆದ (ಅರ್ಹತಾ ಖಂಡಿಕೆ ‘ಎ’ ಯಂತೆ) ಅಥವಾ ಎರಡು ವರ್ಷ ಪಿಯುಸಿ ವ್ಯಾಸಾಂಗ ಕರ್ನಾಟಕದಲ್ಲಿ ಮುಗಿಸಿ, ಅವರ ಪಾಲಕರ (ತಂದೆ/ತಾಯಿ) ಪೈಕಿ ಯಾರಾದರೊಬ್ಬರು ಕನಿಷ್ಟ ಏಳು ವರ್ಷ ಕರ್ನಾಟಕದಲ್ಲಿ ವ್ಯಾಸಾಂಗ ಮಾಡಿದ ಎಲ್ಲ ವಿದ್ಯಾರ್ಥಿಗಳು (ಅರ್ಹತಾ ಖಂಡಿಕೆ ‘ಬಿ’ಯಂತೆ) ರಾಜ್ಯದ ಎಲ್ಲ ಸರಕಾರಿ ವೈದ್ಯಕೀಯ ಕಾಲೇಜುಗಳ ರೂ. 59850 ಶುಲ್ಕವಿರುವ ಸೀಟುಗಳನ್ನು ಮತ್ತು ರೂ. 124404 ಶುಲ್ಕದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ‘ಸರಕಾರಿ ಕೋಟಾ’ದ ಸೀಟುಗಳನ್ನು ಪಡೆಯಲು ಅರ್ಹತೆಯನ್ನು ಪಡೆಯುತ್ತಾರೆ. ಆದರೆ, ಹತ್ತಕ್ಕಿಂತ ಒಂದು ವರ್ಷ ಕಡಿಮೆಯೂ ಕರ್ನಾಟಕದಲ್ಲಿ ಕಲಿತ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಖಾಸಗಿ ಕೋಟಾದ ಸೀಟುಗಳನ್ನು ಪಡೆಯಲು ಇಲ್ಲಿ ಅನರ್ಹರಾಗುತ್ತಾರೆ. ಒಂದು ವರ್ಷವೂ ಕರ್ನಾಟಕದಲ್ಲಿ ಕಲಿತಿರದ ಕರ್ನಾಟಕೇತರ ರಾಜ್ಯಗಳ ವಿದ್ಯಾರ್ಥಿಗಳು ಎರಡನೇ ಆದ್ಯತೆಯ ಖಾಸಗಿ ಸೀಟುಗಳನ್ನು ನಮ್ಮ ರಾಜ್ಯದ ಅಲ್ಪಸಂಖ್ಯಾತರ ವೈದ್ಯಕೀಯ ಕಾಲೇಜುಗಳಲ್ಲಿ ಪಡೆಯುತ್ತಿದ್ದಾರೆ.

ಸೀಟು ಹಂಚಿಕೆ ನಿಯಮಗಳನ್ನು ರೂಪಿಸುವ ಸರಕಾರಿ ಅಧಿಕಾರಿಗಳ ಎಡವಟ್ಟುಗಳು ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿವೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರುಗಳಿಗೆ ದೂರು ನೀಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಪಸಂಖ್ಯಾತರ ಕಲ್ಯಾಣ ಸಚಿವರನ್ನು ಭೇಟಿ ಮಾಡಿ ದೂರು ನೀಡಿದರೆ, ಸಂಜೆ ಅವರ ಕಚೇರಿಯಲ್ಲಿ ವಿಷಯಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕರೆದು ಸಭೆ ಮಾಡೋಣವೆಂಬ ಆಶ್ವಾಸನೆ ನೀಡಿ, ಸಭೆ ಮಾಡದೆ ತಪ್ಪಿಸಿಕೊಂಡಿದ್ದಾರೆ. ರಾಜ್ಯ ನಗರಾಭಿವೃದ್ಧಿ ಸಚಿವರು ಅನ್ಯಾಯಕ್ಕೊಳಗಾದ ರಾಜ್ಯದ ಅಲ್ಪಸಂಖ್ಯಾತ ಮಕ್ಕಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಗರಿಷ್ಟ ಪ್ರಯತ್ನ ಮಾಡುತ್ತಿದ್ದರೂ ಇನ್ನೂ ಫಲ ಕಂಡಿಲ್ಲ. 

ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ, ರಾಜ್ಯ ಅಲ್ಪಸಂಖ್ಯಾತ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ಪ ಸಂಖ್ಯಾತರ ಆಯೋಗದ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಿ, ಮಾತುಕತೆ ನಡೆಸಿದಾಗ ಸರಕಾರದ ಈ ನಿಯಮ ತಪ್ಪು ಎಂಬುದನ್ನು ಎಲ್ಲರೂ ಒಪ್ಪಿಕೊಂಡು, ಕೂಡಲೇ ಸರಿಪಡಿಸಲೇಬೇಕೆಂಬ ಉತ್ಸಾಹವನ್ನೂ ವ್ಯಕ್ತಪಡಿಸಿದ್ದರೂ ನಿಯಮಗಳು ಮಾತ್ರ ತಿದ್ದುಪಡಿಕೊಂಡಿಲ್ಲ. ಸರಕಾರವನ್ನು ಉಳಿಸುವ ಮತ್ತು ಉರುಳಿಸುವ ಮಹತ್ಕಾರ್ಯಗಳಲ್ಲಿ ಸಕ್ರೀಯರಾಗಿರುವ ರಾಜಕಾರಣಿಗಳು ಒಂದೆಡೆಯಾದರೆ, ತಮ್ಮದೇ ದೈನಂದಿನ ಚಟುವಟಿಕೆ, ಸರಕಾರಿ ಸಭೆಗಳಲ್ಲಿ ನಿಭಿಡರಾಗಿರುವ ಅಧಿಕಾರಿಗಳು ಇನ್ನೊಂದೆಡೆ. ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿದ್ದು ಸಚಿವರ ಮನೆ, ಕಚೇರಿ, ವಿಧಾನ ಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಕಟ್ಟಡಗಳಲ್ಲಿರುವ ಕಚೇರಿಗಳಿಗೆ ಅಲೆದಾಡಿದರೂ, ರಾಜ್ಯದ ಅಲ್ಪಸಂಖ್ಯಾತ ಮಕ್ಕಳಿಗೆ ಸಿಗಬೇಕಾದ ನ್ಯಾಯ ಮಾತ್ರ ಇನ್ನೂ ಮರೀಚಿಕೆಯಾಗಿ ಉಳಿದಿದೆ.

- ಉಮರ್ ಯು. ಎಚ್.
ಅಧ್ಯಕ್ಷ, ಕರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News