ದೂರದೃಷ್ಟಿಯ, ಹಸಿರು ಬಜೆಟ್: ಪ್ರಧಾನಿ ಮೋದಿ ಶ್ಲಾಘನೆ

Update: 2019-07-05 17:54 GMT

ಹೊಸದಿಲ್ಲಿ, ಜು.4: ಎನ್‌ಡಿಎ ಸರಕಾರದ ದ್ವಿತೀಯ ಅವಧಿಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಹಸಿರು ಮತ್ತು ನಾಗರಿಕ ಸ್ನೇಹಿ ಬಜೆಟ್ ಆಗಿದ್ದು ದೇಶ ಉದ್ದೇಶಿತ ಗುರಿ ತಲುಪಲು ಸೂಕ್ತವಾದ ಮಾರ್ಗವನ್ನು ಇದು ಖಾತರಿಪಡಿಸಿದೆ ಎಂದಿದ್ದಾರೆ.

ಅಭಿವೃದ್ಧಿ ಸ್ನೇಹಿ ಬಜೆಟ್ ಇದಾಗಿದೆ. ನವಭಾರತಕ್ಕೆ ಪೀರಕವಾಗಿರುವ ಬಜೆಟ್ ದೇಶದ ಕೃಷಿ ವಲಯದ ರೂಪಾಂತರಕ್ಕೆ ಮಾರ್ಗಸೂಚಿಯಾಗಿದೆ. ಅಲ್ಲದೆ 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಕೃಷಿಕರಿಗೆ ನೆರವಾಗಲಿದ್ದು, ಪರಿಸರ ಮತ್ತು ಹಸಿರು ಶಕ್ತಿಗೆ ವಿಶೇಷ ಒತ್ತು ನೀಡಿರುವ ಹಸಿರು ಬಜೆಟ್ ಇದಾಗಿದೆ. ಅಲ್ಲದೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿದೆ ಎಂದ ಅವರು, ಸರಕಾರದ ಕಾರ್ಯನೀತಿಯು ದುರ್ಬಲ ವರ್ಗದವರಲ್ಲಿ ಶಕ್ತಿ ತುಂಬಿ ಅವರನ್ನು ದೇಶದ ಅಭಿವೃದ್ಧಿಯ ಸಶಕ್ತ ಕೇಂದ್ರವಾಗಿ ರೂಪಿಸಲಿದೆ ಎಂದು ಹೇಳಿದ್ದಾರೆ.

--------------

 ಕೇಂದ್ರ ಸರಕಾರದ ಬಜೆಟ್‌ನಲ್ಲಿ ಹೊಸದೇನೂ ಇಲ್ಲ. ಉದ್ಯೋಗ ಸೃಷ್ಟಿಯ ಕುರಿತು ಯಾವುದೇ ಯೋಜನೆಗಳ ಪ್ರಸ್ತಾಪವಿಲ್ಲ, ಹೊಸ ಉಪಕ್ರಮಗಳ ಘೋಷಣೆಯಿಲ್ಲ. ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ನೀಡಿದಂತಾಗಿದೆ.

- ಅಧೀರ್ ರಂಜನ್ ಚೌಧರಿ, ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ

ಇದೊಂದು ಭವಿಷ್ಯವಾದಿ ಬಜೆಟ್ ಆಗಿದ್ದು ಶುದ್ಧ ಇಂಧನ ಹಾಗೂ ನಗದು ರಹಿತ ವ್ಯವಹಾರದ ಬಗ್ಗೆ ಸೂಕ್ತ ಪ್ರಾಮುಖ್ಯತೆ ನೀಡಲಾಗಿದೆ. ಕಳೆದ ಐದು ವರ್ಷ ಎನ್‌ಡಿಎ ಸರಕಾರ ಆರ್ಥಿಕ ಕ್ಷೇತ್ರ, ವಸತಿ, ಮೂಲಭೂತ ಸೌಕರ್ಯ ಒದಗಿಸುವಿಕೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯವನ್ನು ಈ ಬಜೆಟ್ ಎತ್ತಿತೋರಿಸಿದೆ.

- ಅಮಿತ್ ಶಾ , ಕೇಂದ್ರ ಗೃಹ ಸಚಿವ .

ಈ ಬಜೆಟ್ ರೈತ ಮತ್ತು ಉದ್ಯಮ ಸ್ನೇಹಿಯಾಗಿರುವ ಜೊತೆಗೆಯೇ, ಯುವಜನತೆಯ, ಮಹಿಳೆಯರ , ಮಧ್ಯಮ ವರ್ಗದವರ, ಬಡವರ ಹಾಗೂ ಜನಸಾಮಾನ್ಯರ ತಲ್ಲಣಗಳ ಕುರಿತು ಗಮನ ಹರಿಸಿದೆ. ಪ್ರಗತಿ ಮತ್ತು ಸಮೃದ್ಧಿಯೆಡೆಗಿನ ದೇಶದ ಮುನ್ನಡೆಗೆ ಈ ಬಜೆಟ್ ವೇಗ ನೀಡಲಿದೆ.

- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ.

ಸರಕಾರ ಐದು ವರ್ಷದ ಅವಧಿ ಪೂರೈಸಿದಾಗ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗುರಿಯನ್ನು ಮೀರಲಿದೆ ಎಂಬ ವಿಶ್ವಾಸವನ್ನು ಈ ಬಜೆಟ್ ಮೂಡಿಸಿದೆ.

- ನಿತಿನ್ ಗಡ್ಕರಿ, ಕೇಂದ್ರ ಸಾರಿಗೆ ಸಚಿವ.

ದೂರದೃಷಿಯ ಬಜೆಟ್. ಹಳ್ಳಿಗಳನ್ನು, ಬಡವರ ಹಾಗೂ ರೈತರ ಬದುಕನ್ನು ಪರಿವರ್ತಿಸುವ ಉದ್ದೇಶ ಹೊಂದಿದೆ.

- ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ.

ದೇಶದ ಪ್ರಪ್ರಥಮ ಪೂರ್ಣಾವಧಿಯ ಮಹಿಳಾ ವಿತ್ತ ಸಚಿವೆ ಮಂಡಿಸಿರುವ ಈ ಬಜೆಟ್ ದೇಶದ ಜನತೆಯ ನಿರೀಕ್ಷೆಗೆ ಪೂರಕವಾಗಿದೆ.

- ಆದಿತ್ಯನಾಥ್, ಉ.ಪ್ರದೇಶ ಮುಖ್ಯಮಂತ್ರಿ.

ನಿಸ್ತೇಜ, ಅಪ್ರಸ್ತುತ, ನಿರುತ್ತೇಜಕ, ಗೊತ್ತು ಗುರಿಯಿಲ್ಲದ ಬಜೆಟ್. ಆರ್ಥಿಕ ಪುನಶ್ಚೇತನದ ಬಗ್ಗೆ ಏನನ್ನೂ ಹೇಳಿಲ್ಲ. ಗ್ರಾಮೀಣ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ನಗರ ಪುನರುಜ್ಜೀವನದ ಬಗ್ಗೆ ಸೊಲ್ಲೆತ್ತಿಲ್ಲ. ನವಭಾರತದ ಪರಿಕಲ್ಪನೆ ನೀರಸ ಕಣ್ಣುಕಟ್ಟಿನ ಪದಗಳ ವೈಭವದಲ್ಲಿ ಕುಂದಿ ಹೋಗಲಿದೆಯೇ ?

- ರಣದೀಪ್ ಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ವಕ್ತಾರ.

ಬಜೆಟ್‌ನಲ್ಲಿ ಘೋಷಿಸಲಾದ ಪ್ರತೀ ಮನೆಗೂ ನೀರು ಪೂರೈಸುವ ‘ಹರ್ ಘರ್ ಜಲ್ ಯೋಜನೆ’ ಸ್ವಾಗತಾರ್ಹ.

- ನಿತೀಶ್ ಕುಮಾರ್, ಬಿಹಾರದ ಮುಖ್ಯಮಂತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News