ಎನ್‌ಜಿಒ ಸಂಸ್ಥೆಗಳಿಗೆ ನಿಧಿ ಸಂಗ್ರಹಕ್ಕೆ ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್ ಸ್ಥಾಪನೆ: ನಿರ್ಮಲಾ

Update: 2019-07-05 17:56 GMT

 ಹೊಸದಿಲ್ಲಿ, ಜು.5: ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗಿರುವ ಎನ್‌ಜಿಒ ಸಂಸ್ಥೆಗಳಿಗೆ ಈಗ ನಿಧಿ ಸಂಗ್ರಹಿಸಲು ಹೊಸ ಮಾರ್ಗವೊಂದನ್ನು ರೂಪಿಸಲಾಗಿದೆ. ಎನ್‌ಜಿಒ(ಸರಕಾರೇತರ ಸಂಸ್ಥೆಗಳು) ನಿಧಿ ಸಂಗ್ರಹಿಸಲು ಅನುಕೂಲವಾಗುವಂತೆ ಸಾಮಾಜಿಕ ವಿನಿಮಯ ಕಚೇರಿ(ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್)ಯನ್ನು ಆರಂಭಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಸೆಬಿ(ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ)ಯ ನಿಯಂತ್ರಣದಲ್ಲಿರುವ ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸಂಸ್ಥೆಗಳು ಲಿಸ್ಟ್ ಮಾಡಿಕೊಳ್ಳುವ ಮೂಲಕ ಇದರ ಪ್ರಯೋಜನ ಪಡೆಯಬಹುದು(ಸ್ಟಾಕ್ ಮಾರ್ಕೆಟ್‌ನಲ್ಲಿ ಖಾಸಗಿ ಸಂಸ್ಥೆಗಳು ಲಿಸ್ಟ್ ಮಾಡುವ ರೀತಿಯಲ್ಲಿ).

 ಈ ಎಕ್ಸ್‌ಚೇಂಜ್ ವ್ಯವಸ್ಥೆಯ ಮೂಲಕ ಸಂಸ್ಥೆಗಳು ಇಕ್ವಿಟಿ, ಡೆಟ್ ಮ್ಯೂಚುವಲ್ ಫಂಡ್ ಅಥವಾ ಮ್ಯೂಚುವಲ್ ಫಂಡ್ ಮೂಲಕ ಬಂಡವಾಳ ಸಂಗ್ರಹಿಸಬಹುದು. ಸಾಮಾಜಿಕ ಉದ್ಯಮಶೀಲತೆಯಲ್ಲಿ ಬಂಡವಾಳ ಹೂಡಲು ಆಸಕ್ತಿ ಇರುವ ಹೂಡಿಕೆದಾರರು ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್ ಅನ್ನು ಸಂಪರ್ಕಿಸಿದರೆ ಅಲ್ಲಿ ಲಿಸ್ಟ್ ಆಗಿರುವ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಆದರೆ ಹೂಡಿಕೆ ಮಾಡುವ ಹಣ ಯಾವ ಕಾರ್ಯಕ್ಕೆ ಬಳಕೆಯಾಗುತ್ತದೆ ಎಂಬ ಬಗ್ಗೆ ಸೆಬಿ ನಿಗಾ ವಹಿಸುತ್ತದೆ . ಇಂತಹ ವ್ಯವಸ್ಥೆ ಬ್ರಿಟನ್, ಕೆನಡಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ಬ್ರೆಝಿಲ್, ಜಮೈಕಾ ಹಾಗೂ ಕೀನ್ಯಾದಲ್ಲಿ ಈಗಾಗಲೇ ಅಸ್ತಿತ್ವದಲ್ಲಿವೆ ಎಂದು ಸಚಿವೆ ಹೇಳಿದ್ದಾರೆ.

 ಸರಕಾರದ ನಿರ್ಧಾರ ಸ್ವಾಗತಾರ್ಹವಾದುದು. ಇದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸಂಸ್ಥೆಗಳಿಗೆ ಆರ್ಥಿಕ ನೆರವು ಒದಗುವುದಲ್ಲದೆ ಆಡಳಿತವನ್ನು ಉತ್ತೇಜಿಸುತ್ತದೆ ಎಂದು ಡೆಲಾಯ್ಟೆ ಇಂಡಿಯಾ ಎನ್‌ಜಿಒ ಸಂಸ್ಥೆಯ ಪಾಲುದಾರ ಹೇಮಲ್ ರೊಬಾಲಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News