ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ: ಶೋಭಾ ಕರಂದ್ಲಾಜೆ

Update: 2019-07-06 11:26 GMT

ಉಡುಪಿ, ಜು. 6: ಮೈತ್ರಿ ಸರಕಾರದ ಆಂತರಿಕ ಗೊಂದಲ ಬಹಿರಂಗವಾಗಿದೆ. ಆನಂದ್ ಸಿಂಗ್ ರಾಜೀನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಾಗಿತ್ತು. ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವಿನ ಒಳ ಜಗಳವೇ ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೆ, ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಎತ್ತಿಕಟ್ಟಿದ್ದಾರೆ. ಆಂತರಿಕ ಜಗಳ ಹೆಚ್ಚು ಮಾಡಿದ್ದೇ ಸಿದ್ದರಾಮಯ್ಯ. ಸರಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ. ಅದು ಬಿಟ್ಟು ಮೋದಿ, ಯಡಿಯೂರಪ್ಪಅವರ ಕಡೆ ಕೈ ತೋರಿಸುವುದು ಸರಿಯಲ್ಲ ಎಂದು ಹೇಳಿದರು.

ಬೇರೆ ಪಕ್ಷದ ಸದಸ್ಯರಲ್ಲದವರು ಬಿಜೆಪಿಗೆ ಬರಬಹುದು. ರಾಜೀನಾಮೆ ಸ್ವೀಕಾರವಾದ ಮೇಲೆ ಯಾರೂ ಬಿಜೆಪಿಗೆ ಸೇರಬಹುದು ಎಂದು ಆಹ್ವಾನ ನೀಡಿದ ಅವರು, ಬಿಜೆಪಿ ಸಿದ್ಧಾಂತ ಮತ್ತು ಮೋದಿಯನ್ನು ಒಪ್ಪಿ ಯಾರೂ ಕೂಡ ಪಕ್ಷಕ್ಕೆ ಬರಬಹುದು. ಜಿ.ಟಿ. ದೇವೇಗೌಡ ಹಿಂದೆ ನಮ್ಮ ಜೊತೆ ಇದ್ದರು. ಅಲ್ಲಿ ಬೇಸರವಾಗಿದ್ದರೆ ಅವರು ಯಾವ ಸಮಯಕ್ಕೂ ಬಿಜೆಪಿಗೆ ಬರಬಹುದು ಎಂದರು.

ಮೋದಿಯ ಯೋಜನೆಯನ್ನು ಅನುಷ್ಟಾನಕ್ಕೆ ತರುವ ಸರಕಾರ ರಾಜ್ಯದಲ್ಲಿ ಬರಬೇಕು. ರಾಜ್ಯದಲ್ಲಿ ಬರಗಾಲ ಇರುವಾಗ ಮುಖ್ಯಮಂತ್ರಿ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಉಡುಪಿಯಲ್ಲಿ ಮಸಾಜ್ ಮಾಡಿಸಿದ ಮುಖ್ಯಮಂತ್ರಿ, ಗ್ರಾಮ ವಾಸ್ತವ್ಯದ ನಾಟಕ ಆಡಿ, ಅಮೆರಿಕಾಕ್ಕೆ ಹೋದರು. ಮುಖ್ಯಮಂತ್ರಿ ವಾಪಾಸ್ಸು ಬರುವಾಗ ಕಾಂಗ್ರೆಸ್ ಯಾವ ನಾಟಕ ಆಡುತ್ತದೆ ಎಂಬುದನ್ನು ನೋಡಬೇಕು ಎಂದು ಅವರು ಹೇಳಿದರು.

ರಾಜ್ಯದ ಬೆಳವಣಿಗೆಯನ್ನು ರಾಜ್ಯಪಾಲರು ಗಮನಿಸಬೇಕು. 15 ಜನ ರಾಜೀನಾಮೆ ಕೊಟ್ಟರೆ ಸರಕಾರಕ್ಕೆ ಬಹುಮತ ಇಲ್ಲ. ರಾಜೀನಾಮೆ ಕೊಟ್ಟವರು ಬಿಜೆಪಿ ಸಂಪರ್ಕದಲ್ಲಿ ಇಲ್ಲ. ಕಾಂಗ್ರೆಸ್ ನಾಯಕರ ನಡವಳಿಕೆಯೇ ಶಾಸಕರ ರಾಜೀನಾಮೆಗೆ ಕಾರಣ ಎಂದು ಅವರು ದೂರಿದರು.

ಗೊಂದಲ ನಿವಾರಣೆ ಮಾಡಲು ಡಿ.ಕೆ.ಶಿವಕುಮಾರ್ ಪ್ರವೇಶ ಮಾಡಿರುವುದು ಬಹಳ ವಿಳಂಬವಾಗಿದೆ. ಸ್ಪೀಕರ್ ಕಚೇರಿಗೆ ಈಗ ಹೋಗಿ ಸಮಾಧಾನ ಮಾಡಿದರೆ ಏನು ಪ್ರಯೋಜನ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News