ಪಿಂಕ್ ಸಿಟಿ ಜೈಪುರಕ್ಕೆ ವಿಶ್ವ ಪಾರಂಪರಿಕ ತಾಣದ ಪಟ್ಟ

Update: 2019-07-06 15:17 GMT

ಹೊಸದಿಲ್ಲಿ,ಜು.6: ತನ್ನ ಭವ್ಯ ವಾಸ್ತುಶಿಲ್ಪ ಪರಂಪರೆ ಮತ್ತು ಸಂಸ್ಕೃತಿಗೆ ಹೆಸರಾಗಿರುವ ರಾಜಸ್ಥಾನದ ‘ಗೋಡೆಯ ನಗರ ’ಜೈಪುರ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

ಅಝರ್‌ಬೈಜಾನ್‌ನ ಬಾಕು ನಗರದಲ್ಲಿ ನಡೆಯುತ್ತಿರುವ ಯುನೆಸ್ಕೋ ವಿಶ್ವ ಪಾರಂಪರಿಕ ಸಮಿತಿ(ಡಬ್ಲುಎಚ್‌ಸಿ)ಯ 43ನೇ ಅಧಿವೇಶನದಲ್ಲಿ ಜೈಪುರವನ್ನು ವಿಶ್ವ ಪಾರಂಪರಿಕ ತಾಣವೆಂದು ಶನಿವಾರ ಘೋಷಿಸಲಾಗಿದೆ. ಜೂ.30ರಿಂದ ಆರಂಭಗೊಂಡಿರುವ ಅಧಿವೇಶನವು ಜು.10ರವರೆಗೆ ನಡೆಯಲಿದೆ.

ಜೈಪುರವು ವಿಶ್ವ ಪಾರಂಪರಿಕ ತಾಣವೆಂದು ಮಾನ್ಯತೆ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘‘ಜೈಪುರವು ಸಂಸ್ಕೃತಿ ಮತ್ತು ಶೌರ್ಯದೊಂದಿಗೆ ಗುರುತಿಸಿಕೊಂಡಿರುವ ನಗರವಾಗಿದೆ. ಸೊಗಸು ಮತ್ತು ಹುರುಪಿನಿಂದ ಕೂಡಿರುವ ಜೈಪುರದ ಆದರಾತಿಥ್ಯವು ಎಲ್ಲೆಡೆಗಳಿಂದ ಪ್ರವಾಸಿಗಳನ್ನು ಸೆಳೆಯುತ್ತಿದೆ ’’ಎಂದು ಟ್ವೀಟಿಸಿದ್ದಾರೆ.

ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿಯ ತಂಡವು 2018ರಲ್ಲಿ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದರು.

1727ರಲ್ಲಿ ಎರಡನೇ ಸವಾಯಿ ಜೈ ಸಿಂಗ್ ಅವರ ಆಳ್ವಿಕೆಯಲ್ಲಿ ಜೈಪುರ ನಗರವನ್ನು ಸ್ಥಾಪಿಸಲಾಗಿತ್ತು. ಅದು ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ರಾಜಸ್ಥಾನದ ರಾಜಧಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News