ಜನರನ್ನು ಬದಲಿಸದೇ ಜಗತ್ತನ್ನು ಬದಲಿಸಲಾಗದು: ಲೇಖಕಿ ಮೀರಾ

Update: 2019-07-06 15:21 GMT

ಮಣಿಪಾಲ, ಜು.6: ಜನರನ್ನು ಬದಲಿಸದೇ ಈ ಜಗತ್ತನ್ನು ಬದಲಿಸಲು ಸಾಧ್ಯವಿಲ್ಲ ಎಂಬುದನ್ನು ನಾನು ಒಬ್ಬ ಪತ್ರಕರ್ತಳಾಗಿ ಕಂಡುಕೊಂಡೆ. ಜನರನ್ನು ಬದಲಿಸಲು ನಾನು ಬರೆಯಲಾರಂಭಿಸಿ ಪೂರ್ಣಕಾಲಿಕ ಲೇಖಕಿಯಾದೆ ಎಂದು ಮಲಯಾಳಂನ ಖ್ಯಾತನಾಮ ಕಾದಂಬರಿಕಾರ್ತಿ, ಲೇಖಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಕೆ.ಆರ್.ಮೀರಾ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಎಂಡ್ ಸೈನ್ಸಸ್ ಆಶ್ರಯದಲ್ಲಿ ಶನಿವಾರ ಏರ್ಪಡಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ ‘ನನ್ನ ಕಥೆ ನನ್ನ ಕಥೆಗಳು’ ಕುರಿತು ಕೆ.ಆರ್.ಮೀರಾ ಮಾತನಾಡುತಿದ್ದರು.

ಬರವಣಿಗೆಯ ಮೂಲಕ ನಾನು ನಮ್ಮಲ್ಲಿ ಗಟ್ಟಿಯಾಗಿ ಮನೆ ಮಾಡಿರುವ ಸ್ಟಿರಿಯೋಟೈಪ್‌ನಿಂದ ಹೊರಬರಲು ಪ್ರಯತ್ನಿಸುತ್ತೇನೆ. ಸ್ಟಿರಿಯೋಟೈಪ್ ಎಂಬುದು ಮಹಿಳೆ ಮತ್ತು ಪುರುಷರಿಬ್ಬರಲ್ಲೂ ನಾನಾ ರೂಪದಲ್ಲಿ ಇರಲು ಸಾಧ್ಯವಿಲ್ಲ. ಇಂಥ ಸಿದ್ಧ ಚೌಕಟ್ಟಿನಿಂದ ಹೊರಬರಲು ನನ್ನ ಕಥೆ,ಕಾದಂಬರಿ, ನೀಳ್ಗತೆಗಳು ಪ್ರಯತ್ನಿಸುತ್ತವೆ ಎಂದು ತನ್ನ ಮೇರುಕೃತಿ ‘ಅರಾಚಾರ್’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಮೀರಾ ನುಡಿದರು.

ಸ್ಟಿರಿಯೋಟೈಪ್ ಎಂಬುದು ಮನುಷ್ಯನಲ್ಲಿ ಅವಾಸ್ತವಿಕವಾಗಿರುತ್ತದೆ. ಅದನ್ನು ಸಂಪೂರ್ಣವಾಗಿ ನಾಶಪಡಿಸದೇ ನಾವು ನಮ್ಮತನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ಕೆಡವಿಯೇ ನಾನು ನನ್ನತನವನ್ನು ಕಂಡುಕೊಳ್ಳಲು ಪ್ರಯತ್ನಿಸಿದೆ ಎಂದು ‘ಮಲಯಾಳ ಮನೋರಮಾ’ದಲ್ಲಿ ಖ್ಯಾತ ಪತ್ರಕರ್ತೆ ಯಾಗಿ ಹೆಸರು ಮಾಡಿದ ಬಳಿಕ 2001ರಲ್ಲಿ ಅದಕ್ಕೆ ರಾಜೀನಾಮೆ ನೀಡಿ ಪೂರ್ಣಕಾಲಿಕ ಲೇಖಕಿಯಾಗಿ ಈವರೆಗೆ ಐದು ಸಣ್ಣ ಕಥಾಸಂಗ್ರಹ, ಎರಡು ನೀಳ್ಗತೆಗಳು, ಐದು ಕಾದಂಬರಿ ಹಾಗೂ ಎರಡು ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿರುವ ಮೀರಾ ತಿಳಿಸಿದರು.

ಲೇಖಕಿಯಾಗಿ ನನ್ನನ್ನು ರೂಪಿಸುವಲ್ಲಿ ನಾನು ಹುಟ್ಟಿ, ಆಡಿ, ಬೆಳೆದ ಕೊಲ್ಲಂ ಜಿಲ್ಲೆಯ ಸಸ್ತಾಂಕೊಟ್ಟ ಎಂಬ ಅತಿ ಸುಂದರ ಹಳ್ಳಿ ಮಹತ್ವದ ಪಾತ್ರ ವಹಿಸಿದೆ. ಈ ಹಳ್ಳಿ ನನಗೆ ಆತ್ಮಗೌರವ, ಆತ್ಮವಿಶ್ವಾಸವನ್ನು ನೀಡಿದೆ. ಈ ಹಳ್ಳಿಯಲ್ಲಿ ನೆಲೆಸಿದ್ದ ಗೌರವಾನಿತ್ವ ಹಿರಿಯ ನಿವೃತ್ತ ಅಧಿಕಾರಿ ವಿ.ಪಿ.ನಾಯರ್ ಅವರ ಪತ್ನಿ ನಾನು ‘ಅಮ್ಮ’ ಎಂದೇ ಕರೆಯುತಿದ್ದ ಲಲಿತಾ ಪಿ.ನಾಯರ್ ಅವರೇ ನನಗೆ ಕಥೆ ಬರೆಯಲು ಸ್ಪೂರ್ತಿಯಾದವರು. ಇದರಿಂದಾಗಿಯೇ ನಾನು 12ನೇ ವಯಸ್ಸಿನಲ್ಲಿ ನನ್ನ ಮೊದಲ ಸಣ್ಣಕತೆಯನ್ನು ಬರೆದೆ ಎಂದು ಮೀರಾ ನೆನಪಿನ ಸುರುಳಿ ಬಿಚ್ಚಿಟ್ಟರು.

ಲಲಿತ ಪಿ.ನಾಯರ್ ಅವರು 50 ವರ್ಷಗಳ ಅವಧಿಯಲ್ಲಿ ನೋಟ್‌ಪುಸ್ತಕ ವೊಂದರಲ್ಲಿ ಬರೆದು ಯಾರಿಗೂ ಕಾಣದಂತೆ ಜತನದಿಂದ ಕಾದಿಟ್ಟ ಕಥೆ ಮತ್ತು ಕವನಗಳನ್ನು ಓದಲೆಂದು ನೀಡಿದಾಗ, ನನಗೆ ಅಂದಿನ ಮಹಿಳೆಯರ ಕುರಿತಂತೆ ಹೊಸ ವಿಷಯಗಳು ತಿಳಿದವು.ಹೊಸ ಚಿಂತನೆಗಳನ್ನು ಸೃಜಿಸುವಂತಿದ್ದ ಆ ಕಥೆ-ಕವನಗಳು, ಅದಾಗಲೇ ಸಾಹಿತ್ಯದಿಂದ ಪತ್ರಿಕಾರಂಗಕ್ಕೆ ಪ್ರವೇಶಿಸಿದ್ದ ನನ್ನ ಚಿಂತನೆಗಳನ್ನು ಬದಲಿಸುವಂತೆ ಮಾಡಿದವು ಎಂದರು.

ಹೀಗಾಗಿ ನಾನು ಚಿಕ್ಕಂದಿನಿಂದ ನೋಟ್‌ಪುಸ್ತಕಗಳಲ್ಲಿ ಬರೆದಿಟ್ಟಿದ್ದ ಕಥೆಗಳನ್ನು ಹುಡುಕಿ ಪ್ರಕಟಿಸುವಂತೆ ಮಾಡಿದವು. ಇದಕ್ಕೆ ಜನರಿಂದ ಬಂದ ಉತ್ತಮ ಪ್ರತಿಕ್ರಿಯೆ 2001ರಲ್ಲಿ ಪತ್ರಿಕಾರಂಗವನ್ನು ಬಿಟ್ಟು ಪೂರ್ಣಕಾಲಿಕವಾಗಿ ಲೇಖಕಿಯಾಗುವಂತೆ ಪ್ರೇರೇಪಿಸಿದವು ಎಂದು ಮೀರಾ ತಿಳಿಸಿದರು.

ಸ್ತ್ರೀವಾದದ ಕುರಿತು ಇಂದು ಮಹಿಳೆಯರು ಹಾಗೂ ಪುರುಷರಲ್ಲಿ ತಪ್ಪು ಅಭಿಪ್ರಾಯಗಳಿವೆ. ಸ್ತ್ರೀವಾದ ಎಂಬುದು ಅಧಿಕಾರದ ಪರಿಕಲ್ಪನೆ, ಸಮಾನತೆಯ ಬದ್ಧತೆಯಾಗಿದೆ. ಆದರೆ ಮಹಿಳೆಯರಲ್ಲೂ ಇಂದು ಸಾಕಷ್ಟು ಕೆಟ್ಟವರಿದ್ದಾರೆ. ಕೊಲೆಗಡುಕರನ್ನೂ ಕಾಣಬಹುದು. ಅದೇ ರೀತಿ ಪುರುಷರಲ್ಲೂ ಮಾತೃ ಹೃದಯವಂತರೂ ಕಾಣಲು ಸಿಗುತ್ತಾರೆ ಎಂದರು.

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಎಂಡ್ ಸೈನ್ಸಸ್‌ನ ನಿರ್ದೇಶಕರಾದ ಪ್ರೊ.ವರದೇಶ ಹಿರೇಗಂಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News