ಅಬ್ರಾಹಂ ವಿರುದ್ಧ ಮಾನನಷ್ಟ ಮೊಕದ್ದಮೆ: ಉಡುಪಿ ನ್ಯಾಯಾಲಯಕ್ಕೆ ಹಾಜರಾದ ಪ್ರಮೋದ್ ಮಧ್ವರಾಜ್

Update: 2019-07-06 15:32 GMT

ಉಡುಪಿ, ಜು. 6: ಬೆಂಗಳೂರಿನ ಆರ್‌ಟಿಐ ಕಾರ್ಯಕರ್ತ ಅಬ್ರಾಹಂ ಟಿ.ಜೆ. ವಿರುದ್ಧ ದಾಖಲಿಸಿರುವ ಮಾನನಷ್ಟ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಉಡುಪಿ ಒಂದನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದರು.

ಸಿಂಡಿಕೇಟ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ 1.10ಕೋಟಿ ರೂ. ಮೌಲ್ಯದ ಭೂಮಿಯ ದಾಖಲೆಯನ್ನು ನೀಡಿ 193 ಕೋಟಿ ರೂ. ಸಾಲ ಪಡೆದಿರುವುದಾಗಿ ಪ್ರಮೋದ್ ಮಧ್ವರಾಜ್ ವಿರುದ್ಧ ಅಬ್ರಾಹಂ ಕೇಂದ್ರ ಹಣಕಾಸು ಸಚಿವಾಲಯಕ್ಕೆ 2018ರ ಮಾ.14ರಂದು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್, ಅಬ್ರಾಹಂ ವಿರುದ್ಧ ಉಡುಪಿ ಒಂದನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಯನ್ನು ದಾಖಲಿಸಿದ್ದರು. ಈ ಕುರಿತಂತೆ ದೂರು ನೀಡಿದ ಪ್ರಮೋದ್ ಮಧ್ವರಾಜ್ ಇಂದು ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಅವರ ಮುಂದೆ ಹೇಳಿಕೆಯನ್ನು ನೀಡಿದರು.

ಪ್ರಮೋದ್ ಮಧ್ವರಾಜ್ ಬೆಳಗ್ಗೆ ಮತ್ತು ಮಧ್ಯಾಹ್ನ ತನ್ನ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಿದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಆದೇಶ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಮುಂದಿನ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶ ನೀಡಿದರು.

ಈ ಸಂದರ್ಭ ಪ್ರಮೋದ್ ಪರ ವಕೀಲ ಶಾಂತಾರಾಮ್ ಶೆಟ್ಟಿ ಹಾಜರಿದ್ದರು.

ಅದೇ ರೀತಿ ಜು.5ರಂದು ಅಬ್ರಾಹಂ ಒಂದನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಮೋದ್ ಮಧ್ವರಾಜ್ ವಿರುದ್ಧ ಮಾನನಷ್ಟ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಇದರ ವಿಚಾರಣೆಯನ್ನು ನ್ಯಾಯಾಲಯ ಆ.17ಕ್ಕೆ ಮುಂದೂಡಿ ಆದೇಶ ನೀಡಿದೆ.

ಅಬ್ರಾಹಂ ತನ್ನ ವಿರುದ್ಧ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ಪ್ರಮೋದ್ ಮಧ್ವರಾಜ್ ಎರಡನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಕಿರುವ ಇಂಜೆಕ್ಷನ್ ಆರ್ಡರ್ ಸಂಬಂಧ ಅಬ್ರಾಹಂ ಇಂದು ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದರು.

ಈ ಬಗ್ಗೆ ಯಾವುದೇ ಆದೇಶ ನೀಡಬಾರದು ಎಂದು ಅಬ್ರಾಹಂ ನ್ಯಾಯಾಧೀಶೆ ಶೋಭಾ ಅವರಲ್ಲಿ ಮನವಿ ಮಾಡಿದರು. ಇದರ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News