ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ-ರಕ್ಷಿತ್ ಕೆದಿಲಾಯ

Update: 2019-07-06 16:39 GMT

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಇನ್ನೊಂದು ಅಶ್ಲೀಲ ವೀಡಿಯೊ ತುಣುಕಿನ ಕುರಿತೂ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ವಿವೇಕಾನಂದ ಕಾಲೇಜು ಘಟಕದ ಅಧ್ಯಕ್ಷ ರಕ್ಷಿತ್ ಕೆದಿಲಾಯ ಆಗ್ರಹಿಸಿದರು.

ಅವರು ಶನಿವಾರ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಹಾಗೂ ಎಬಿವಿಪಿ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗ ಎಬಿವಿಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅತ್ಯಾಚಾರ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದ ಪೊಲೀಸ್ ಇಲಾಖೆಗೆಯ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇನ್ನೊಂದು ಅಶ್ಲೀಲ ವಿಡೀಯೋ ತುಣುಕಿನ ಕುರಿತೂ ಪ್ರಕರಣ ದಾಖಲಿಸಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ ಅವರು, ಅಮಲು ಮುಕ್ತ ಭಾರತ ಆಗಬೇಕೆನ್ನುವ ಧ್ಯೇಯವನ್ನಿಟ್ಟುಕೊಂಡು ಎಬಿವಿಪಿ ರಾಷ್ಟ್ರಾದ್ಯಂತ ಅಭಿಯಾನಗಳನ್ನು ನಡೆಸುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರವೂ ಬೇಕಾಗಿದೆ. ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟು ಎಬಿವಿಪಿ ವಿರುದ್ಧ ಅಪಪ್ರಚಾರಗಳನ್ನು ನಡೆಸುತ್ತಿರುವ ಡಿವೈಎಫ್‍ಐ, ಎನ್‍ಎಸ್‍ಯುಐ ಸಂಘಟನೆಗಳು ಸೇರಿದಂತೆ ಅಪಪ್ರಚಾರಗಳನ್ನು ನಡೆಸುವವರ ವಿರುದ್ಧ ಕಠಿನ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ಮಂಗಳೂರು ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಮನಿಷಾ ಶೆಟ್ಟಿ ಮಾತನಾಡಿ, ಅತ್ಯಾಚಾರ ಪ್ರಕರಣದ ಆರೋಪಿಗಳು, ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪಸರಿಸಿದವರು, ಎಬಿವಿಪಿ ವಿರುದ್ಧ ಅಪಪ್ರಚಾರಗಳನ್ನು ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಬಿವಿಪಿ ಸಂಘಟನೆಯ ಬದ್ಧತೆ, ರಾಷ್ಟ್ರಪ್ರೇಮದ ಕುರಿತು ಚರ್ಚೆಗೆ ಬನ್ನಿ, ಆದರೆ ಸುಳ್ಳು ಆರೋಪಗಳಿಗೆ ಎಬಿವಿಪಿ ಬಗ್ಗುವುದಿಲ್ಲ ಎಂದು ಹೇಳಿದರು.

ಎಬಿವಿಪಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್, ಪ್ರಮುಖರಾದ ಶ್ರೇಯಾ, ಹೇಮಾ ಶುಭಾಷಿಣಿ, ಅಶ್ವಿನಿ ಮತ್ತಿತರರರು ಉಪಸ್ಥಿತರಿದ್ದರು.

ಪುತ್ತೂರಿನ ವಿವೇಕಾನಂದ ಕಾಲೇಜು, ಅಂಬಿಕಾ ವಿದ್ಯಾಲಯ, ಬೆಟ್ಟಂಪಾಡಿ ಸ.ಪ್ರ.ದ. ಕಾಲೇಜು, ಸುಬ್ರಹ್ಮಣ್ಯ ಕಾಲೇಜುಗಳ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾ ಸಭೆಯ ಬಳಿಕ ಸಹಾಯಕ ಕಮಿಷನರ್ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News