ಈಗ ಈ ವಹಿವಾಟುಗಳಿಗೆ ಪಾನ್ ಬದಲು ಆಧಾರ್ ಬಳಸಬಹುದು

Update: 2019-07-06 17:50 GMT

 ಹೊಸದಿಲ್ಲಿ,ಜು.6: ಸಾಂಪ್ರದಾಯಿಕವಾಗಿ ಪಾನ್ ಸಂಖ್ಯೆ ಕಡ್ಡಾಯವಾಗಿದ್ದ 50,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಮತ್ತು ಇತರ ಎಲ್ಲ ಉದ್ದೇಶಗಳಿಗಾಗಿ ಇನ್ನು ಮುಂದೆ ಆಧಾರ್‌ನ್ನು ಬಳಸಬಹುದು ಎಂದು ಕಂದಾಯ ಕಾರ್ಯದರ್ಶಿ ಅಜಯ ಭೂಷಣ ಪಾಂಡೆ ಅವರು ಶನಿವಾರ ಇಲ್ಲಿ ತಿಳಿಸಿದರು.

ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳು ಈವರೆಗೆ ಪಾನ್ ಉಲ್ಲೇಖ ಕಡ್ಡಾಯವಾಗಿದ್ದ ಎಲ್ಲ ಕಡೆಗಳಲ್ಲಿ ಆಧಾರ ಸ್ವೀಕೃತಿಗಾಗಿ ವ್ಯವಸ್ಥೆಗಳನ್ನು ಪರಿಷ್ಕರಿಸಲಿವೆ ಎಂದರು.

ತೆರಿಗೆದಾರರಿಗೆ ಅನುಪಾಲನೆಯನ್ನು ಸುಲಭವಾಗಿಸಲು ಪಾನ್ ಮತ್ತು ಆಧಾರ್ ಪರಸ್ಪರ ಬದಲಾವಣೆಗೆ ಮುಂಗಡಪತ್ರದಲ್ಲಿ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಪಾನ್ ಕಡ್ಡಾಯವಾಗಿರುವಲ್ಲಿ ಆಧಾರ ಬಳಕೆ ಸಾಧ್ಯವಾಗಲಿದೆ.

ಹಾಲಿ 22 ಕೋಟಿ ಪಾನ್ ಕಾರ್ಡ್‌ ಗಳು ಆಧಾರ್‌ನೊಂದಿಗೆ ಜೋಡಣೆಗೊಂಡಿವೆ. 120 ಕೋಟಿಗೂ ಅಧಿಕ ಜನರು ಆಧಾರ್ ಹೊಂದಿದ್ದಾರೆ. ಈಗ ಯಾರಾದರೂ ಪಾನ್ ಹೊಂದಲು ಬಯಸಿದರೆ ಅವರು ಮೊದಲು ಆಧಾರ ಬಳಸಿ ಪಾನ್ ಸೃಷ್ಟಿಸಿಕೊಳ್ಳಬೇಕು ಮತ್ತು ನಂತರ ಅದನ್ನು ಬಳಸಬೇಕು. ಆದರೆ ಇನ್ನು ಮುಂದೆ ಆಧಾರ್ ಇದ್ದವರು ಪಾನ್‌ನ್ನು ಸೃಷ್ಟಿಸಿಕೊಳ್ಳಬೇಕಿಲ್ಲ. ಇದು ಹೆಚ್ಚಿನ ಅನುಕೂಲವನ್ನು ಕಲ್ಪಿಸಲಿದೆ ಎಂದು ಪಾಂಡೆ ತಿಳಿಸಿದರು. ಪಾನ್ ಅನ್ನು ಕ್ರಮೇಣ ರದ್ದುಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು, ಜನರಿಗೆ ಈಗ ಅಗತ್ಯವಿದ್ದಾಗ ಪಾನ್ ಅಥವಾ ಆಧಾರ್ ಅನ್ನು ಬಳಸುವ ಆಯ್ಕೆ ದೊರೆಯಲಿರುವುದರಿಂದ ಅಂತಹ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News