ಫಲಿಮಾರು: ವಿದ್ಯುತ್ ಟವರ್ ಸಮಸ್ಯೆ; ಶಾಸಕ ಲಾಲಾಜಿ ಮೆಂಡನ್ ಭೇಟಿ

Update: 2019-07-07 12:38 GMT

ಪಡುಬಿದ್ರಿ: ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣೆಕಟ್ಟು ಪ್ರದೇಶದ ಬಳಿ ನಿರ್ಮಿಸಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಟವರ್ ಕಾಮಗಾರಿ ಹಾಗೂ ಅಣೆಕಟ್ಟು ಕಾಮಗಾರಿಯಿಂದ ತೊಂದರೆಗೊಳಗಾಗುವ ಪ್ರದೇಶಕ್ಕೆ ಶಾಸಕ ಲಾಲಾಜಿ ಮೆಂಡನ್ ರವಿವಾರ ಭೇಟಿ ನೀಡಿದರು.

ಈ ವೇಳೆ ಸ್ಥಳೀಯರ ಅಹವಾಲು ಸ್ವೀಕರಿಸಿದ ಲಾಲಾಜಿ ಮೆಂಡನ್, ಕಾಮಗಾರಿಯಿಂದ ತೊಂದರೆಗೊಳಗಾಗುವ ಸ್ಥಳೀಯರೊಂದಿಗೆ ಕೆಪಿಟಿಸಿಎಲ್ ಅಧಿಕಾರಿಗಳು ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ನಂದಿಕೂರು ಸಬ್‍ಸ್ಟೇಷನ್‍ನಿಂದ ಮೂಲ್ಕಿ ಸಬ್‍ಸ್ಟೇಷನ್‍ಗೆ 110 ಕೆವಿ ಸಾಮರ್ಥ್ಯದ ವಿದ್ಯುತ್ ಲೈನ್ ಹಾದುಹೋಗಲು ಪಲಿಮಾರು ಅಣೆಕಟ್ಟು ಪ್ರದೇಶದ ಬಳಿ ಟವರ್ ನಿರ್ಮಾಣಕ್ಕೆ ಜಮೀನು ಗೊತ್ತು ಪಡಿಸಿತ್ತು. ಈ ಪ್ರದೇಶದಲ್ಲಿ ಟವರ್‍ಗಳ ನಿರ್ಮಾಣದಿಂದ ಮನೆ, ತೋಟ ಹಾಗೂ ಕೃಷಿಭೂಮಿಗೆ ತೊಂದರೆಗಳಾಗಲಿದೆ. ಅದಕ್ಕಾಗಿ ನಮಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಶಾಸಕರು ವಿವರಿಸಿದರು.

ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಉಪ್ಪುನೀರು ತಡೆ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಹರಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿ ಕರೆ ಮಾಡಿ ಸೂಚಿಸಿದರು. ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಾಸಕರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News