ಗೋಸಾಗಾಟ ಶಂಕೆ: ಮಾವಿನಹಣ್ಣು ಸಾಗಾಟದ ವಾಹನ ತಡೆದು ಸಂಘಪರಿವಾರದ ಕಾರ್ಯಕರ್ತರಿಂದ ತಲವಾರು ದಾಳಿ

Update: 2019-07-07 13:21 GMT

ಮಂಗಳೂರು, ಜು.7: ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದಾರೆಂಬ ಸಂಶಯದ ಮೇರೆಗೆ ಸಂಘಪರಿವಾರದ ಕಾರ್ಯಕರ್ತರು ಯುವಕನಿಗೆ ತಲವಾರಿನಿಂದ ದಾಳಿ ನಡೆಸಿದ ಘಟನೆ ನಗರದ ಕುಲಶೇಖರ ಸಿಲ್ವರ್‌ಗೇಟ್ ಬಳಿ ರವಿವಾರ ಬೆಳಗ್ಗೆ ನಡೆದಿದೆ.

ಉಳಾಯಿಬೆಟ್ಟು ನಿವಾಸಿ ಉಮರ್ ಫಾರೂಕ್ (32) ಹಲ್ಲೆಗೊಳಗಾದ ಯುವಕ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ.

ಘಟನೆ ವಿವರ: ರವಿವಾರ ಬೆಳಗ್ಗೆ 4:30ರ ಸುಮಾರು ಉಳಾಯಿಬೆಟ್ಟುವಿನಿಂದ ಉಮರ್ ಫಾರೂಕ್ ಮಾಲಕತ್ವದ ಟೆಂಪೋ ಗೂಡ್ಸ್ ವಾಹನದಲ್ಲಿ ಮಾವಿನಹಣ್ಣನ್ನು ಲೋಡ್ ಮಾಡಿಕೊಂಡು ಮಂಗಳೂರಿನ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತಿತ್ತು. ವಾಹನವು ಕುಲಶೇಖರ ಸಿಲ್ವರ್‌ಗೇಟ್ ಸಮೀಪಿಸುತ್ತಿದ್ದಂತೆ ಒಂದೇ ಬೈಕ್‌ನಲ್ಲಿ ಆಗಮಿಸಿದ ಮೂವರಿದ್ದ ಸಂಘಪರಿವಾರದ ದುಷ್ಕರ್ಮಿಗಳ ಗುಂಪೊಂದು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ ಎನ್ನಲಾಗಿದೆ.

ದುಷ್ಕರ್ಮಿಗಳು ‘ವಾಹನದಲ್ಲಿ ಏನಿದೆ? ದನ ಸಾಗಾಟ ಮಾಡಲಾಗುತ್ತಿದೆಯೇ’ ಎಂದು ಉಮರ್ ಫಾರೂಕ್ ಅವರನ್ನು ಪ್ರಶ್ನಿಸಿದ್ದಾರೆ. ವಾಹನದಲ್ಲಿ ಮಾವಿನಹಣ್ಣು ಸಾಗಾಟ ಮಾಡಲಾಗುತ್ತಿದೆ ಎಂದು ಫಾರೂಕ್ ಉತ್ತರಿಸಿದ್ದಾರೆ. ಈ ವೇಳೆ ಜಾತಿ ನಿಂದಿಸಿದ ದುಷ್ಕರ್ಮಿಗಳು, ಫಾರೂಕ್‌ನನ್ನು ಹಿಡಿದೆಳೆದಿದ್ದಾರೆ. ಘಟನೆ ತೀವ್ರತೆ ಕಂಡು ಬೆದರಿದ ಚಾಲಕ ಅಶ್ಫಕ್ ಸ್ಥಳದಿಂದ ಓಡಿ ಹೋಗಿದ್ದಾರೆ. ದುಷ್ಕರ್ಮಿಗಳು ತಲವಾರು ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಗಾಯಾಳು ಫಾರೂಕ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತನ ಕಾಲು, ಕೈ, ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮಂಗಳೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾವಿನಹಣ್ಣು ಲೋಡ್ ಮಾಡಿದ್ದ ವಾಹನವನ್ನು ಕಂಕನಾಡಿ ನಗರ ಠಾಣೆಗೆ ಕೊಂಡೊಯ್ಯಲಾಗಿದೆ.

ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಶಂಕಿತರ ಸೆರೆ: ಮಾವಿನಹಣ್ಣು ಸಾಗಾಟ ಮಾಡುತ್ತಿದ್ದ ವಾಹನ ತಡೆಹಿಡಿದು ಯುವಕನಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದ್ದಾರೆ. ಆರೋಪಿಗಳ ವಿಚಾರಣೆ ನಡೆದಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News