ಪಂಜಿಮೊಗರು: ರಾಮಕೃಷ್ಣ ಮಿಷನ್‌ನಿಂದ ಸ್ವಚ್ಛತಾ ಶ್ರಮದಾನ

Update: 2019-07-07 14:33 GMT

ಮಂಗಳೂರು, ಜು.7: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ 31ನೇ ಸ್ವಚ್ಛತಾ ಶ್ರಮದಾನವನ್ನು ಮಂಗಳೂರು ನಗರ ಸಮೀಪದ ಪಂಜಿಮೊಗರುವಿನಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು. ಎಂಆರ್‌ಪಿಎಲ್ ಅಧಿಕಾರಿಗಳಾದ ಮಂಜುನಾಥ್ ಎಚ್.ವಿ. ಹಾಗೂ ಶ್ರೀಶ ಕರ್ಮರನ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದಡಿ ಪಂಜಿಮೊಗರು ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಲೋಕಾರ್ಪಣೆ ಮಾಡಲಾಯಿತು. ಮಾಜಿ ಮನಪಾ ಸದಸ್ಯ ದಯಾನಂದ ಶೆಟ್ಟಿ ತಂಗುದಾಣವನ್ನು ಉದ್ಘಾಟಿಸಿದರು.

ಶ್ರಮದಾನಕ್ಕೆ ಚಾಲನೆ ನೀಡಿದ ಎಂಆರ್‌ಪಿಎಲ್ ಅಧಿಕಾರಿ ಮಂಜುನಾಥ್ ಮಾತನಾಡಿ, ಸ್ವಚ್ಛತೆ ಕಾಪಾಡುವುದು ಹಾಗೂ ಅದನ್ನು ಪ್ರಚುರಪಡಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಚ್ಛ ಭಾರತ ಅಭಿಯಾನದಿಂದಾಗಿ ಸಾರ್ವಜನಿಕರಲ್ಲಿ ಶುಚಿತ್ವದ ಕುರಿತು ಅರಿವು ಮೂಡಲಾರಂಭಿಸಿದೆ. ಅದಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಸಿಗಬೇಕು. ಎಂಆರ್‌ಪಿಎಲ್ ತನ್ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಸ್ವಚ್ಛ ಮಂಗಳೂರ ಕನಸನ್ನು ನನಸು ಮಾಡುವ ವಿಶಿಷ್ಠ ಪ್ರಯೋಗ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದ ದಯಾನಂದ್ ಶೆಟ್ಟಿ, ನಗರದ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಅಗಲೀಕರಣವಾಗಿ ತಂಗುದಾಣಗಳು ಕಣ್ಮರೆಯಾಗುತ್ತಿವೆ. ಪುನಃ ಅವುಗಳನ್ನು ನಿರ್ಮಿಸುವಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಬಸ್ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ. ಅದೇರೀತಿ ಈ ಪ್ರದೇಶದಲ್ಲಿ ಅಂತಹ ತಂಗುದಾಣದ ಅವಶ್ಯಕತೆಯಿದ್ದು, ಇಂದು ಸಾಕಾರಗೊಂಡಿದೆ ಎಂದರು.

ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಪ್ರಸಾದ್, ಚೀಫ್ ಜನರಲ್ ಮ್ಯಾನೇಜರ್ ಸುಭಾಷ್ ಪೈ, ಸ್ವಾಮಿ ಏಕಗಮ್ಯಾನಂದ ಶ್ರೀ, ಸತೀಶ್ ಆಳ್ವ, ರಾಮಸುಬ್ರಮಣ್ಯಂ, ಪ್ರಕಾಶ್ ಅಮೀನ್, ಸುಧಾಕರ್ ಕಾವೂರು, ಸುನೀಲ್ ಪಾಂಡೇಶ್ವರ್, ರಾಮಕೃಷ್ಣ ಕೊಟ್ಟಾರಿ ಮತ್ತಿತರರು ಇದ್ದರು.

ಶ್ರಮದಾನ: ಪಂಜಿಮೊಗರು ವಿದ್ಯಾನಗರ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಎಂಆರ್‌ಪಿಎಲ್ ಸಿಬ್ಬಂದಿ ಸುಭಾಷ ಪೈ ನೇತೃತ್ವದಲ್ಲಿ ವಿದ್ಯಾನಗರ ಬಸ್ ತಂಗುದಾಣದ ಸುತ್ತಮುತ್ತಲಿನ ಪ್ರದೇಶವನ್ನು ಶುಚಿ ಮಾಡಿದರು.

ಸಚಿನ್ ಕಾಮತ್ ಹಾಗೂ ಸೂರಜ್ ಸೋಲಂಕಿ ನೇತೃತ್ವದಲ್ಲಿ ಕಾರ್ಯಕರ್ತರು ಎಂ.ವಿ. ಶೆಟ್ಟಿ ಕಾಲೇಜಿನ ಮುಂಭಾಗದಲ್ಲಿದ್ದ ತ್ಯಾಜ್ಯರಾಶಿಯನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಒಟ್ಟು ಮೂರು ತ್ಯಾಜ್ಯ ಬಿಸಾಡುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ ಮತ್ತೆ ಸಾರ್ವಜನಿಕರು ಅಲ್ಲಿ ಕಸ ಹಾಕದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.

ಮಾರ್ಗ ಬದಿಯ ತೋಡುಗಳಲ್ಲಿದ್ದ ತ್ಯಾಜ್ಯ ಹಾಗೂ ಮಣ್ಣು ತೆಗೆದು ಮಳೆಗಾಲದ ನೀರು ಸರಾಗವಾಗಿ ಸಾಗುವಂತೆ ಮಾಡಲಾಯಿತು. ರಸ್ತೆಬದಿ ದೊಡ್ದ ಹೊಂಡಗಳನ್ನು ಜೆಸಿಬಿ ಬಳಸಿ ಮಣ್ಣು ಹಾಕಿ ಮುಚ್ಚಲಾಯಿತು. ಕೊನೆಯದಾಗಿ ಗಾಂಧಿನಗರ ಬಸ್ ತಂಗುದಾಣ ಸ್ವಚ್ಛಗೊಳಿಸಿ ನಾಮಫಲಕ ತೊಳೆದು ಶುಚಿ ಮಾಡಲಾಯಿತು.

ಸ್ವಚ್ಛ ಮಂಗಳೂರು ಪ್ರಧಾನ ಸಂಯೋಜಕ ದಿಲ್‌ರಾಜ್ ಆಳ್ವ ಹಾಗೂ ರಾಕೇಶ್ ನೇತೃತ್ವದಲ್ಲಿ ತಂಗುದಾಣದ ನಿರ್ಮಾಣವಾಗಿದೆ. ಎಂಆರ್‌ಪಿಎಲ್ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಕಾರ್ಯಕರ್ತರಾದ ಮೋಹನ್ ಕೊಟ್ಟಾರಿ, ಭರತ್ ಚಂದ್ರ, ಜಗನ್ ಕೋಡಿಕಲ್, ಅವಿನಾಶ್ ಅಂಚನ್ ಇನ್ನಿತರರು ಶ್ರಮದಾನದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News