ರಾಹುಲ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಸುಬ್ರಮಣಿಯನ್ ಸ್ವಾಮಿ ವಿರುದ್ಧ ಎಫ್‌ಐಆರ್

Update: 2019-07-07 15:41 GMT

ಜಶ್‌ಪುರ,ಜು.7: ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆಯೆಂದು ಚತ್ತೀಸ್‌ಗಢ ಪೊಲೀಸರು ರವಿವಾರ ತಿಳಿಸಿದ್ದಾರೆ.

ಜಶ್ಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪವನ್ ಅಗರ್‌ವಾಲ್ ಅವರು ನೀಡಿದ ದೂರನ್ನು ಆಧರಿಸಿ ಶನಿವಾರ ರಾತ್ರಿ ಪತ್ಥಲ್‌ಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಜಶ್ಪುರದ ಎಸ್ಪಿ ಶಂಕರ್‌ಲಾಲ್ ಬೇಲ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 ರಾಹುಲ್ ಗಾಂಧಿ ಮಾದಕದ್ರವ್ಯ ಕೊಕೇನ್ ಸೇವಿಸುತ್ತಿದ್ದಾರೆಂದು ಸ್ವಾಮಿ ಆರೋಪಿಸಿರುವುದಾಗಿ ಅಗರ್‌ವಾಲ್ ಅವರು ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ. ಅಂತಹ ಹೇಳಿಕೆಗಳನ್ನು ನೀಡುವುದಕ್ಕೆ ಸುಬ್ರಮಣಿಯನ್ ಅವರಿಗೆ ಯಾವುದೇ ಹಕ್ಕಿಲ್ಲ ಹಾಗೂ ಅವರ ಬಳಿ ಯಾವುದೇ ವಾಸ್ತವಿಕ ಪುರಾವೆಗಳಿಲ್ಲ ಎಂದು ಅಗರ್‌ವಾಲ್ ಹೇಳಿದ್ದಾರೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 504 ( ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅಪಮಾನಿಸುವುದು), 505(2) (ವ್ಯಕ್ತಿಯ ವರ್ಗ ಅಥವಾ ಸಮುದಾಯವನ್ನು ಪ್ರಚೋದಿಸುವ ದುರುದ್ದೇಶ) ಹಾಗೂ 511 ( ಜೀವಾವಧಿ ಶಿಕ್ಷೆ ಅಥವಾ ಇತರ ಜೈಲು ಶಿಕ್ಷೆಯನ್ನು ವಿಧಿಸಬಹುದಾದಂತಹ ಅಪರಾಧಗಳನ್ನು ಎಸಗಲು ಪ್ರಯತ್ನ) ರ ಅಡಿ ಪ್ರಕರಣ ದಾಖಲಿಸಲಾಗಿದೆಯೆಂದು ಎಸ್ಪಿ ತಿಳಿಸಿದ್ದಾರೆ.

 ರಾಹುಲ್ ವಿರುದ್ಧ ಸುಬ್ರಹ್ಮಣ್ಯನ್ ಸ್ವಾಮಿ ಅವರ ಹೇಳಿಕೆಯು ಅಸ್ವೀಕಾರಾರ್ಹ ಹಾಗೂ ತೀವ್ರವಾಗಿ ಖಂಡನೀಯವಾದುದೆಂದು ಚತ್ತೀಸ್‌ಗಢ ಕಾಂಗ್ರೆಸ್ ವಕ್ತಾರ ಶೈಲೇಶ್ ನಿತಿನಂ ತ್ರಿವೇದಿ ತಿಳಿಸಿದ್ದಾರೆ. ಅವರ ಹೇಳಿಕೆಯು ರಾಹುಲ್‌ಗಾಂಧಿ, ಹಾಗೂ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತು ಇಡೀ ದೇಶದಲ್ಲಿ ಅಪಮಾನಿಸಿದೆ. ಇಂತಹ ಸುಳ್ಳು ಹೇಳಿಕೆಯನ್ನು ನೀಡಲು ಅವರಿಗೆ ಯಾವುದೇ ನೈತಿಕ ಹಾಗೂ ಕಾನೂನುಬದ್ಧ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

   ಸುಬ್ರಮಣಿಯನ್ ಸ್ವಾಮಿ ವಿರುದ್ಧ ಯುವಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಸುಬ್ರಮಣಿಯನ್ ಸ್ವಾಮಿ ವಿರುದ್ಧ ದೂರು ನೀಡಿವೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News