×
Ad

ಬುರ್ಹಾನ್ ವಾನಿಯ ಸಾವಿನ ವರ್ಷಾಚರಣೆ: ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಅಮಾನತು

Update: 2019-07-07 21:24 IST

ಶ್ರೀನಗರ,ಜು.7: ಹಿಝ್ಬುಲ್ ಭಯೋತ್ಪಾದಕ ಬುರ್ಹಾನ್ ವಾನಿಯ ಸಾವಿನ ಮೂರನೇ ವರ್ಷಾಚರಣೆಯ ಅಂಗವಾಗಿ ಪ್ರತ್ಯೇಕತಾವಾದಿಗಳು ಸೋಮವಾರ ಕಾಶ್ಮೀರದಾದ್ಯಂತ ಪ್ರತಿಭಟನಾ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರವಿವಾರ ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಾದ ಅನಂತನಾಗ್,ಪುಲ್ವಾಮ, ಕುಲ್ಗಾಮ್ ಮತ್ತು ಶೋಪಿಯಾನ್‌ ಗಳಲ್ಲಿ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಅಮಾನತುಗೊಳಿಸಿದ್ದಾರೆ.

ಸೈಯದ್ ಅಲಿ ಗೀಲಾನಿ, ಮಿರ್ವೈಝ್ ಉಮರ್ ಫಾರೂಕ್ ಮತ್ತು ಮುಹಮ್ಮದ್ ಯಾಸಿನ್ ಮಲಿಕ್ ನೇತೃತ್ವದ ಪ್ರತ್ಯೇಕತಾವಾದಿ ಪಕ್ಷಗಳ ಒಕ್ಕೂಟವಾಗಿರುವ ಜಂಟಿ ಪ್ರತಿರೋಧ ನಾಯಕತ್ವ(ಜೆಆರ್‌ಎಲ್)ವು ‘ಬುರ್ಹಾನ್ ವಾನಿಯ ಬಲಿದಾನ ’ವನ್ನು ಸ್ಮರಿಸಲು ಸೋಮವಾರ ಪ್ರತಿಭಟನಾ ಬಂದ್ ಆಚರಿಸುವಂತೆ ಜನರಿಗೆ ಕರೆ ನೀಡಿದೆ.

ಕಣಿವೆಯಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಇತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು.

ಕುಲ್ಗಾಮ್, ಅನಂತನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳ ಮೂಲಕ ಹಾದು ಹೋಗುವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಈಗಾಗಲೇ ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜು.1ರಿಂದ ಆರಂಭಗೊಂಡಿರುವ ಅಮರನಾಥ ಯಾತ್ರೆಗೆ ಇದೇ ಹೆದ್ದಾರಿ ಬಳಕೆಯಾಗುತ್ತಿದೆ. ಯಾತ್ರೆಯು ಆ.15ರಂದು ಅಂತ್ಯಗೊಳ್ಳಲಿದೆ.

ಹಿಝ್ಬುಲ್ ಮುಝಾಹಿದೀನ್ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಆಗಿದ್ದ ವಾನಿ 2016,ಜು.8ರಂದು ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟಿದ್ದ.

 ವಾನಿಯ ಸಾವಿನ ಬಳಿಕ ನಾಲ್ಕು ತಿಂಗಳ ಕಾಲ ಕಾಶ್ಮೀರ ಪ್ರಕ್ಷುಬ್ಧಗೊಂಡಿದ್ದು, ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಚ್ಚಿದ್ದರು, ಪೊಲೀಸರನ್ನು ಥಳಿಸಿ ಭದ್ರತಾ ಪಡೆಗಳ ವಾಹನಗಳನ್ನು ಸುಟ್ಟು ಹಾಕಿದ್ದರು. ಉದ್ರಿಕ್ತ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಗಳಲ್ಲಿ 98 ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. ಪೆಲೆಟ್ ಗುಂಡೇಟುಗಳ ಗಾಯಗಳಿಂದ ಸುಮಾರು 4,000 ಜನರು ಶಾಶ್ವತ ಅಥವಾ ಭಾಗಶಃ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News