ಸಸಿಹಿತ್ಲು: ಇಬ್ಬರು ಯುವಕರು ಸಮುದ್ರ ಪಾಲು

Update: 2019-07-07 16:16 GMT

ಮಂಗಳೂರು, ಜು.7: ನಗರದ ಹೊರವಲಯ ಸಸಿಹಿತ್ಲು ಸಮೀಪ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ಏಳು ಮಂದಿಯ ತಂಡದ ನಾಲ್ವರು ಯುವಕರು ಸಮುದ್ರಕ್ಕಿಳಿದಿದ್ದು, ಇಬ್ಬರು ಅಲೆಗೆ ಸಿಲುಕಿ ನಾಪತ್ತೆಯಾದ ಘಟನೆ ರವಿವಾರ ಸಂಜೆ ನಡೆದಿದೆ.
ಬಜ್ಪೆ ಸಿದ್ಧಾರ್ಥ ನಗರ ನಿವಾಸಿ ಸುಜಿತ್(32), ಕಾವೂರು ನಿವಾಸಿ ಗುರುಪ್ರಸಾದ್(28) ಸಮುದ್ರದಲ್ಲಿ ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.

ಬಜ್ಪೆ ಮೂಲದ ಸೃಜನ್, ಕಾರ್ತಿಕ್ ಅವರನ್ನು ಸ್ಥಳೀಯ ಗಂಗಾಧರ ಪುತ್ರನ್ ಹಾಗೂ ತಂಡದ ಸದಸ್ಯರು ರಕ್ಷಣೆ ಮಾಡಿದ್ದಾರೆ. ಇವರಲ್ಲಿ ಸೃಜನ್ ತೀವ್ರ ಅಸ್ವಸ್ಥನಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಜ್ಪೆ ಯುವ ಟೈಗರ್ ತಂಡದ ಸ್ಪರ್ಧಾಳುಗಳಾದ ಯುವಕರು, ಸ್ಪರ್ಧೆಯ ಮೊದಲನೇ ಸುತ್ತಿನಲ್ಲಿಯೇ ಪರಾಜಯಗೊಂಡಿದ್ದರಿಂದ ನಾಲ್ವರು ಸದಸ್ಯರು ಅಗ್ಗಿದಕಳಿಯ ಸಮುದ್ರದ ಬಳಿ ಬಂದು ಈಜಾಡಲು ಮುಂದಾಗಿದ್ದರು.

ಯುವಕರನ್ನು ಸ್ಥಳೀಯರು ಹಲವು ಬಾರಿ ಎಚ್ಚರಿಸಿದ್ದಾರೆ. ಸ್ಥಳೀಯರ ಮಾತನ್ನು ಲೆಕ್ಕಿಸದೇ ಏಕಾಏಕಿ ನಾಲ್ವರು ಸಮುದ್ರದ ಅಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಈ ವೇಳೇ ಸ್ಥಳೀಯ ಗಂಗಾಧರ ಪುತ್ರನ್ ಸಾಹಸ ಮೆರೆದು ಇಬ್ಬರನ್ನು ರಕ್ಷಿಸಲು ಯಶಸ್ವಿಯಾದರು. ಆದರೆ, ಇನ್ನಿಬ್ಬರು ಯುವಕರು ಕಡಲಿನ ಅಬ್ಬರದೊಂದಿಗೆ ಸೆಳೆತಕ್ಕೊಳಗಾದರು.

ಸಮುದ್ರದಿಂದ ಸ್ವಲ್ಪ ದೂರದಲ್ಲಿ, ಬಾಕಿಮಾರು ಗದ್ದೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸಂಯೋಜಕರು ಆಗಾಗ ಧ್ವನಿವರ್ಧಕದಲ್ಲಿ ‘ಸಮುದ್ರದತ್ತ ಹೋಗಬೇಡಿ’ ಎಂದು ಎಚ್ಚರಿಸುತ್ತಿದ್ದರು. ಸ್ಥಳೀಯ ಮೀನುಗಾರ ಮಹಿಳೆಯರು ಸಹ ಈ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದರು ಎನ್ನಲಾಗಿದೆ. ಘಟನೆ ವೇಳೆ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನಸಂದಣಿ ಕೂಡಿತ್ತು.

ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News