ಮಂಗಳೂರು: ದಲಿತ ಸಮುದಾಯದ ಕುಂದುಕೊರತೆಗಳ ಸಭೆ

Update: 2019-07-07 17:28 GMT

ಮಂಗಳೂರು, ಜು.7: ಪುತ್ತೂರು ಆದಿವಾಸಿ ಸಮುದಾಯದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ಶ್ಲಾಘನೀಯ ಎಂದು ದಲಿತ ಸಂಘಟನೆಗಳ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದರು.

ಮಂಗಳೂರಿನ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ದಲಿತ ಸಮುದಾಯದ ಕುಂದುಕೊರತೆಗಳ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ದಸಂಸ ಮುಖಂಡ ಎಸ್.ಪಿ. ಆನಂದ ಮಾತನಾಡಿ, ಪುತ್ತೂರು ತಾಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾಮೂಹಿಕ ಅತ್ಯಾಚಾರ ಸೇರಿದಂತೆ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಆದರೆ ಸಂಪ್ಯ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಪೊಲೀಸರು ಮಾತ್ರ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ದೌರ್ಜನ್ಯ ನಡೆಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರನ್ನು ಮಾತ್ರ ಅಮಾನತು ಮಾಡಲಾಗಿ ಠಾಣೆಯ ಸಬ್ ಇನ್‌ಸ್ಪೆಪೆಕ್ಟರ್ ಅವರನ್ನು ರಕ್ಷಿಸಲಾಗಿದೆ. ಇದು ಸರಿಯಲ್ಲ ಎಂದರು.

ಇದಕ್ಕೆ ಉತ್ತರಿಸಿದ ಎಸ್ಪಿ ಲಕ್ಷ್ಮೀಪ್ರಸಾದ್, ಘಟನೆ ಬಗ್ಗೆ ಪುತ್ತೂರು ಡಿವೈಎಸ್ಪಿ ತನಿಖೆ ನಡೆಸುತ್ತಿದ್ದು ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ದಸಂಸ ಮುಖಂಡ ಕೇಶವ ಪಿ. ಮಾತನಾಡಿ, ಪುತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಬಂಧನದ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಆರೋಪಿಗಳು ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ರಾಜಕೀಯ ಒತ್ತಡದ ನಡುವೆಯೂ ಘಟನೆ ಬೆಳಕಿಗೆ ಬಂದ ತಕ್ಷಣ ಬಂಧಿಸಿರುವ ಕ್ರಮ ಇಡೀ ಜಿಲ್ಲೆಯ ದಲಿತ ಸಮುದಾಯಕ್ಕೆ ಹೊಸ ಭರವಸೆ ನೀಡಿದೆ ಎಂದರು.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ ಪ್ರಕರಣ ಹೆಚ್ಚಾಗಲು ಮಾದಕ ವಸ್ತುಗಳ ಜೊತೆಗೆ ರಾಜಕಾರಣಿಗಳ, ಬಲಪಂಥೀಯ ಸಂಘಟನೆಗಳ ನಾಯಕರ ಭಾಷಣಗಳು ಕಾರಣವಾಗುತ್ತಿದೆ. ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪ್ಪಿನಂಗಡಿ ಪೋಲಿಸ್ ಠಾಣೆಯ ಎದುರು ತಲವಾರು ಹಿಡಿದು ಪ್ರತ್ಯುತ್ತರ ನೀಡಲು ಕರೆ ನೀಡಿದ ಬಳಿಕ ಬಜರಂಗದಳದ ಮುಖಂಡ ಭಾಸ್ಕರ ಧರ್ಮಸ್ಥಳ ಎಂಬಾತ ಪೊಲೀಸರ ಸಮ್ಮುಖದಲ್ಲಿಯೇ ವ್ಯಕ್ತಿಯೊರ್ವನನ್ನು ಕೊಲೆ ಮಾಡಲು ಕರೆ ನೀಡಿದರೂ ಈ ತನಕ ಪ್ರಕರಣ ದಾಖಲಿಸದಿರುವ ಬಗ್ಗೆ ದಲಿತ ಹಕ್ಕುಗಳ ಸಮಿತಿ ಮುಖಂಡ ಶೇಖರ್ ಎಲ್. ಆಕ್ಷೇಪ ವ್ಯಕ್ತಪಡಿಸಿದರು.

ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದಲ್ಲಿ ಮಲೆಕುಡಿಯ ಸಮುದಾಯದ ಜಮೀನಿನ ಸಮಸ್ಯೆಗೆ ಸಂಬಂಧಿಸಿದಂತೆ ಯುವಕನೊರ್ವನ ಮೇಲೆ ಮೇಲ್ಜಾತಿಯವರು ತಲವಾರು ದಾಳಿ ನಡೆಸಿದರೂ ಆರೋಪಿಗಳನ್ನು ಬಂಧಿಸಿಲ್ಲ. ತಕ್ಷಣ ಬಂಧಿಸಿಲ್ಲ ಎಂದ ಶೇಖರ್, ಜಮೀನಿನ ಸಮಸ್ಯೆಗಳಿಂದಾಗಿ ಆದಿವಾಸಿ, ದಲಿತ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ನೆರಿಯ ಸುಂದರ ಮಲೆಕುಡಿಯ ಅವರ ಮೇಲೆ ದೌರ್ಜನ್ಯದ ಮುಂದುವರಿದ ಬಳಿಕ ಇದೀಗ ಅದೇ ಭಾಗದಲ್ಲಿ ಜಮೀನಿನ ವಿಚಾರದಲ್ಲಿ ದೌರ್ಜನ್ಯ ನಡೆದಿದೆ. ಕಂದಾಯ ಇಲಾಖೆಯ ಬೇಜವಾಬ್ದಾರಿ ಇದಕ್ಕೆ ಕಾರಣ ಎಂದು ಹೇಳಿದರು.

ವಿಶ್ವನಾಥ ಬಂಟ್ವಾಳ ಮಾತನಾಡಿ, ಸರಕಾರದ ನಿಗಮ, ಮಂಡಳಿ, ಇಲಾಖೆಗಳಿಂದ ದಲಿತ ಸಮುದಾಯದ ಯುವಜನರಿಗೆ ಸ್ವಉದ್ಯೋಗಗಳು ಮಂಜೂರುಗೊಂಡರೂ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮಂಜೂರು ಮಾಡದೆ ವಂಚಿಸುತ್ತಿದೆ. ಈ ಬಗ್ಗೆ ಲೀಡ್ ಬ್ಯಾಂಕ್ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಬಗ್ಗೆ ಮಾತನಾಡಿದ ಲೀಡ್‌ಬ್ಯಾಂಕ್ ಮ್ಯಾನೇಜರ್ ಗಿರೀಶ್ ಕುಮಾರ್, ಲಿಖಿತ ದೂರು ನೀಡಿದರೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಸಾರಿಗೆ, ಕಂದಾಯ, ಕಾರ್ಮಿಕ ಇಲಾಖೆಗಳ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News