×
Ad

5 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪರಿಸರ ಹೋರಾಟಗಾರ ಮುಗಿಲನ್ ಪತ್ತೆ

Update: 2019-07-07 23:17 IST

ಚೆನ್ನೈ, ಜು. 7: ಸ್ಟರ್ಲೈಟ್ ತಾಮ್ರ ಘಟಕದ ವಿರೋಧಿ ಪ್ರತಿಭಟನಕಾರರನ್ನು ಶೂಟ್ ಮಾಡಿದ ಘಟನೆಯಲ್ಲಿ ತೂತುಕುಡಿ ಪೊಲೀಸರ ಶಾಮೀಲಿನ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಫೆಬ್ರವರಿ 15ರಂದು ನಾಪತ್ತೆಯಾಗಿದ್ದ ಪರಿಸರ ಹೋರಾಟಗಾರ ಎಸ್. ಮುಗಿಲನ್ ತಿರುಪತಿ ರೈಲ್ವೆ ನಿಲ್ದಾಣದಲ್ಲಿ ಜುಲೈ 6ರಂದು ಪತ್ತೆಯಾಗಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಆಂಧ್ರ್ರಪ್ರದೇಶದ ರೈಲ್ವೆ ಪೊಲೀಸರ ಕಸ್ಟಡಿಯಲ್ಲಿದ್ದ ಮುಗಿಲನ್ ಅವರನ್ನು ಅವರ ಗೆಳೆಯ ಷಣ್ಮುಗಂ ಗುರುತಿಸಿದ್ದರು. ಆದರೆ, ಇವರ ಬಗ್ಗೆ ನಮಗೇನೂ ಮಾಹಿತಿ ಇಲ್ಲ ಎಂದು ಆಂಧ್ರಪ್ರದೇಶ ರೈಲ್ವೆ ಪೊಲೀಸರು ಹೇಳಿದ್ದರು.

ಈ ಬಗ್ಗೆ ಷಣ್ಮುಗಂ ಸಿಬಿ-ಸಿಐಡಿ ಹಾಗೂ ಮುಗಿಲನ್ ಪತಿ ಪೂಂಗಾದಿ ಅವರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ರೈಲ್ವೆ ಪೊಲೀಸರು ಮುಗಿಲನ್ ಅವರನ್ನು ಕಟ್ಪಾಡಿ ರೈಲ್ವೆ ನಿಲ್ದಾಣಕ್ಕೆ ಕರೆ ತಂದಿದ್ದರು. ಮುಗಿಲನ್ ಅವರನ್ನು ಸಿಬಿ-ಸಿಐಡಿ ಕಸ್ಟಡಿಗೆ ತೆಗೆದುಕೊಂಡು ಚೆನ್ನೈಗೆ ಕರೆದುಕೊಂಡು ಬಂದಿದೆ.

ಕಳೆದ ವರ್ಷದ ಸ್ಟರ್ಲೈಟ್ ತಾಮ್ರ ಘಟಕ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಮುಗಿಲನ್ ಮಧುರೈಯಿಂದ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾಪತ್ತೆಯಾಗಿದ್ದರು. ನಾಪತ್ತೆಯಾಗುವ ಗಂಟೆ ಮುನ್ನ ಪರಿಸರವಾದಿ ಚೆನ್ನೈಯಲ್ಲಿ ಪತ್ರಕರ್ತರನ್ನು ಭೇಟಿಯಾಗಿ ‘ಕೊಳುತ್ತಿಯದ್ ಯಾರ್ ? ಮರೈಕಪಟ್ಟ ಉನ್ಮೈಗಳ್’ (ಬೆಂಕಿ ಇಟ್ಟವರು ಯಾರು ? ಮರೆಮಾಚಲಾದ ಸತ್ಯಗಳು) ಡಾಕ್ಯುಮೆಂಟರಿ ಬಿಡುಗಡೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News