ಕಲಬುರ್ಗಿ ಹತ್ಯೆ ಪ್ರಕರಣ: ಶಂಕಿತ ಹಂತಕರಿಗೆ ಮಂಗಳೂರು ಉದ್ಯಮಿ ಅನಂತ್ ಕಾಮತ್ ರಬ್ಬರ್ ತೋಟದಲ್ಲಿ ತರಬೇತಿ

Update: 2019-07-08 19:08 GMT

ಬೆಂಗಳೂರು,ಜು.5: ಸಾಹಿತಿ, ಚಿಂತಕ ಎಂ.ಎಂ.ಕಲಬುರ್ಗಿ ಅವರ ಕೊಲೆಗೆ ಕೆಲವೇ ದಿನಗಳ ಮೊದಲು ಶಂಕಿತ ಹಂತಕರು ಮಂಗಳೂರಿನ ಉದ್ಯಮಿಯೊಬ್ಬರಿಗೆ ಸೇರಿದ ರಬ್ಬರ್ ಎಸ್ಟೇಟ್‌ನಲ್ಲಿ ಅಂತಿಮ ತರಬೇತಿ ಶಿಬಿರವನ್ನು ನಡೆಸಿದ್ದರೆಂದು, ವಿಶೇಷ ತನಿಖಾ ತಂಡವು ನಡೆಸುತ್ತಿರುವ ವಿಚಾರಣೆಯು ಬಹಿರಂಗಪಡಿಸಿರುವುದಾಗಿ ‘INDIAN EXPRESS’ ವರದಿ ಮಾಡಿದೆ. 77 ವರ್ಷ ವಯಸ್ಸಿನ ಕಲಬುರ್ಗಿ ಅವರನ್ನು 2015ರ ಆಗಸ್ಟ್ 30ರಂದು ಧಾರವಾಡದಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.

ಪ್ರಕರಣದ ಪ್ರಮುಖ ಶಂಕಿತ ಆರೋಪಿ, ಪ್ರವೀಣ್ ಪ್ರಕಾಶ್ ಚತುರ್‌ನನ್ನು ಸಿಟ್ ತಂಡವು ಈ ವರ್ಷದ ಮೇ 31ರಂದು ಬಂಧಿಸಿತ್ತು. ಆತನನ್ನು ಕಳೆದ ತಿಂಗಳು ಪೊಲೀಸರು ಧರ್ಮಸ್ಥಳ ಸಮೀಪದ ರಬ್ಬರ್ ತೋಟಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ದ್ದರು. ಕಲಬುರ್ಗಿ ಅವರ ಕೊಲೆಗೆ ಮುನ್ನ ಹಂತಕರಿಗೆ ತರಬೇತಿ ನೀಡಲಾಗಿತ್ತೆನ್ನಲಾದ ಸ್ಥಳವನ್ನು ಆತ ಗುರುತಿಸಿದ್ದನೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.

ಆರೋಪಿ ಶೂಟರ್ ಗಣೇಶ್ ಮಿಸ್ಕಿನ್‌ನನ್ನು ಚತುರ್ ಬೈಕ್‌ನಲ್ಲಿ ಕಲಬುರ್ಗಿ ಅವರ ನಿವಾಸಕ್ಕೆ ಕರೆದುಕೊಂಡು ಬಂದಿದ್ದನೆನ್ನಲಾಗಿದೆ.

ಕಲಬುರ್ಗಿ ಅವರನ್ನು ಹತ್ಯೆಗೈದ ಆರೋಪಿ ಶೂಟರ್ ಗಣೇಶ್ ಮಿಸ್ಕಿನ್ ಬೈಕ್‌ನಲ್ಲಿ ಅವರ ನಿವಾಸಕ್ಕೆ ಬಂದಿದ್ದನೆನ್ನಲಾಗಿದ್ದು, ಅದನ್ನು ಚತರ್ ಚಲಾಯಿಸುತ್ತಿದ್ದನೆಂದು ಸಿಟ್ ಆರೋಪಿಸಿದೆ.

ಕಲಬುರ್ಗಿ ಅವರ ಹಂತಕರಿಗೆ ತರಬೇತಿ ಶಿಬಿರ ನಡೆದ ಎಸ್ಟೇಟ್ ಮಂಗಳೂರಿನ ಉದ್ಯಮಿ ಕೆ. ಅನಂತ್ ಕಾಮತ್ ಅವರಿಗೆ ಸೇರಿದ್ದೆಂದು ಸಿಟ್ ಗುರುತಿಸಿದೆ. ಕಾಮತ್ ಅವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್) ಸಂಘಟನೆಗಳ ಜೊತೆ ಒಡನಾಟವನ್ನು ಹೊಂದಿದ್ದರೆಂದು ಪೊಲೀಸ್ ಮೂಲಗಳು ಹೇಳಿರುವುದಾಗಿ INDIAN EXPRESS ತಿಳಿಸಿದೆ.

ಮಂಗಳೂರು ಮೂಲದ ಕೆಎಂಕೆ ಸಮೂಹದ ಮಾಲಕ ಹಾಗೂ ಆಡಳಿತ ನಿರ್ದೇಶಕರಾದ ಕಾಮತ್ ಅವರು ಮಾರ್ಕೆಟಿಂಗ್, ರಿಯಲ್‌ಎಸ್ಟೇಟ್ ಹಾಗೂ ಕೃಷಿ ವ್ಯವಹಾರಗಳನ್ನು ಹೊಂದಿದ್ದಾರೆ. 2017ರ ಸೆಪ್ಟೆಂಬರ್ 5ರಂದು ನಡೆದ ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆಗೆ ಸಂಬಂಧಿಸಿ ಸಿಟ್ ನಡೆಸುತ್ತಿರುವ ತನಿಖೆಯಲ್ಲೂ ಅವರ ಹೆಸರು ಕೇಳಿಬಂದಿತ್ತು. ಗೌರಿ ಲಂಕೇಶ್ ಅವರ ನಿವಾಸದ ಸ್ಥಳಪರಿಶೀಲನೆ ನಡೆಸಲು ಬಳಸಲಾದ ವಾಹನಗಳನ್ನು ಕಾಮತ್‌ ಅವರು ಒದಗಿಸಿದ್ದರೆಂದು ಬಂಧಿತ ಆರೋಪಿಗಳು ವಿಚಾರಣೆಯ ವೇಳೆ ತಿಳಿಸಿದ್ದಾರೆನ್ನಲಾಗಿದೆ. ಆದಾಗ್ಯೂ, ಆ ಪ್ರಕರಣದಲ್ಲಿ ಕಾಮತ್ ವಿರುದ್ಧ ಯಾವುದೇ ದೃಢವಾದ ಪುರಾವೆಗಳು ದೊರೆಯದ ಹಿನ್ನೆಲೆಯಲ್ಲಿ ಸಿಟ್ ಪೊಲೀಸರು ಕಾಮತ್ ಅವರನ್ನು ಪ್ರಶ್ನಿಸಿ, ಬಿಟ್ಟುಬಿಟ್ಟಿದ್ದರು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.

‘‘ಗೌರಿ ಲಂಕೇಶ್ ಅವರ ಹತ್ಯೆಗಾಗಿ 2017ರ ಜೂನ್‌ನಲ್ಲಿ ನಡೆಸಲಾಗಿದ್ದ ಸ್ಥಳ ಪರಿಶೀಲನೆ ಸಮರ್ಪಕವಾಗಿರಲಿಲ್ಲ. ಹೀಗಾಗಿ ನಾವು ಪರಿಸ್ಥಿತಿಯನ್ನು ಮರುಅಂದಾಜಿಸಲು ನಿರ್ಧರಿಸಿದ್ದೆವು. 2017ರ ಜೂನ್ ಕೊನೆಗೆ ಅಮೋಲ್ ಕಾಳೆ (ಪ್ರಮುಖ ಸಂಚುಗಾರ), ದಾದಾ (ನಾಪತ್ತೆಯಾಗಿರುವ ಶಂಕಿತ ಆರೋಪಿ), ಅನಂತ್ ಕಾಮತ್ ಹಾಗೂ ನಾನು, ಕಾಮತ್ ಅವರ ಇನ್ನೋವಾ ಕಾರಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದೆವು. ನಾವು ಮನೋಹರ್ ಎಡವೆ (ಇನ್ನೋರ್ವ ಶಂಕಿತ ಆರೋಪಿ) ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದೆವು. ಆನಂತರ ಕಾಳೆ ನಮ್ಮನ್ನು ಮೈಸೂರು ರಸ್ತೆ ಸಮೀಪ ಕೊಂಡೊಯ್ದರು. ಆನಂತ್ ಕಾಮತ್ ಕಾರಿನಲ್ಲಿಯೇ ಕಾದುಕುಳಿತರೆ, ದಾದಾ ಹಾಗೂ ಮನೋಹರ್ ಅವರು ಗೌರಿ ಲಂಕೇಶ್ ನಿವಾಸದ ಸಮೀಪ ಅಡ್ಡಾಡಿ, ಸ್ಥಳ ಪರಿಶೀಲನೆ ವರದಿಯನ್ನು ಪರಿಶೀಲಿಸಿದರು ಎಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಅಮಿತ್ ದೆಗ್ವೇಕರ್ ದೋಷಾರೋಪಪಟ್ಟಿಯಲ್ಲಿ ನೀಡಿರುವ ಸಹಿಹಾಕದ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.

ಕಾಮತ್ ಅವರನ್ನು ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಸಂಪರ್ಕಿಸಿದಾಗ ‘‘ ಎಸ್ಟೇಟ್ ಇಂತಹ ಕೆಲಸಗಳಿಗಾಗಿ ಬಳಕೆಯಾಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಒಂದು ವೇಳೆ ಅದು ನನ್ನ ಅರಿವಿಗೆ ಬಂದಿದ್ದರೆ, ನಾನು ಅದಕ್ಕೆ ಅನುಮತಿ ನೀಡುತ್ತಿರಲಿಲ್ಲ. ಆಸ್ತಿಯ ಬಗ್ಗೆ ತನಿಖೆ ನಡೆಯುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಲಭಿಸಿಲ್ಲ. ಈ ಎಸ್ಟೇಟನ್ನು ಕೇರಳದ ಸಂಸ್ಥೆಯೊಂದಕ್ಕೆ ಲೀಸ್‌ಗೆ ನೀಡಲಾಗಿದೆ. ಈ ರಬ್ಬರ್ ಎಸ್ಟೇಟ್ ಧರ್ಮಸ್ಥಳದಿಂದ ಒಂದು ತಾಸು ದೂರದಲ್ಲಿದೆಯೆಂದು” ಅವರು ಹೇಳಿದರು.

ಧರ್ಮಸ್ಥಳ ದಾರಿಯಾಗಿ ಮಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ಸುಮಾರು 25 ಎಕರೆ ವಿಸ್ತೀರ್ಣದ ಮಹಾಮಾಯಾ ರಬ್ಬರ್ ಪ್ಲಾಂಟೇಶನ್‌ನ ಒಡೆತನ ತಾನು ಹೊಂದಿರುವುದಾಗಿ, ಕೆಎಂಕೆ ಎಸ್ಟೇಟ್‌ನ ವೆಬ್‌ಸೈಟ್ ತೋರಿಸುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯು ಹೇಳಿದೆ.

‘‘2015ರ ಆಗಸ್ಟ್ ತಿಂಗಳಿನಲ್ಲಿ ಮಂಗಳೂರು ಸಮೀಪದ ಪಿಲಾತ ಬೆಟ್ಟಿನಲ್ಲಿ ಈ ತರಬೇತಿ ಶಿಬಿರವನ್ನು ನಡೆಸಲಾಗಿತ್ತು. ಬೆಳಗಾವಿಯಿಂದ ನಾವು ನಾಲ್ವರು ಧರ್ಮಸ್ಥಳಕ್ಕೆ ತೆರಳಿದ್ದೆವು. ಅಮೋಲ್ ಕಾಳೆ (ಯಾನೆ ಗಣೇಶ್ ಮಿಸ್ಕಿನ್, ಕಲಬುರ್ಗಿ ಪ್ರಕರಣದ ಆರೋಪಿ ಶೂಟರ್), ಗೋವಿಂದ, ಮೆಕ್ಯಾನಿಕ್, ಶರದ್ ಕಲಾಸ್ಕರ್, ಇಬ್ಬರು ಬಂಗಾಳಿ ಭಾಷಿಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ತೋಟವನ್ನು ತಲುಪಲು ಧರ್ಮಸ್ಥಳದಿಂದ ನಾವು ಅರ್ಧ ತಾಸು ಪ್ರಯಾಣಿಸಿದೆವು. ರಬ್ಬರ್ ಎಸ್ಟೇಟ್‌ನಲ್ಲಿ ಎರಡು ದೊಡ್ಡ ಗೋಡೌನ್‌ಗಳಿದ್ದವು ’’ಎಂದು ಗೌರಿ ಲಂಕೇಶ್ ಪ್ರಕರಣದ ಸಾಕ್ಷಿಯೊಬ್ಬರು ತಿಳಿಸಿದ್ದಾರೆ.

ತೋಟದಲ್ಲಿ ಎರಡನೆ ದಿನದಂದು ನಮಗೆ ಏರ್‌ ಪಿಸ್ತೂಲ್ ಒದಗಿಸಲಾಯಿತು ಹಾಗೂ ತರಬೇತಿ ನೀಡಲಾಯಿತು. ರಬ್ಬರ್ ಮರಗಳನ್ನು ಗುರಿಯಿರಿಸಿ ಗುಂಡಿಕ್ಕುವಂತೆ ಕಾಳೆ ಹಾಗೂ ಗೋವಿಂದ ಸೂಚಿಸಿದ್ದರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಾಂಬ್ ತಯಾರಿಕೆಗೆ ತರಬೇತಿ ನೀಡಿದ ಅತಿಥಿ ತರಬೇತಿದಾರರನ್ನು ಓರ್ವ ಬಂಗಾಳಿ ವ್ಯಕ್ತಿ ಹಾಗೂ ಇನ್ನೊಬ್ಬನನ್ನು ಪ್ರತಾಪ್ ಹಝ್ರೊ ಎಂದು ಗುರುತಿಸಲಾಗಿತ್ತೆಂದು ಮೂರು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಹಲವಾರು ವ್ಯಕ್ತಿಗಳು ಸಿಟ್‌ಗೆ ನೀಡಿದ ವಿವರಣೆಯಲ್ಲಿ ತಿಳಿಸಿದ್ದಾರೆ.

ಶಂಕಿತ ತರಬೇತಿದಾರರಲ್ಲೊಬ್ಬ 2006-2008ರಲ್ಲಿ ನಡೆದ ಅಜ್ಮೀರ್, ಹೈದರಾಬಾದ್‌ನ ಮಕ್ಕಾ ಮಸೀದಿ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ ನಾಪತ್ತೆಯಾಗಿರುವ ಆರೋಪಿ ಎಂದು ಶಂಕಿಸಲಾಗಿದೆ.

ಕಲಬುರ್ಗಿ ಪ್ರಕರಣದಲ್ಲಿ ಚತುರ್‌ನನ್ನು ಬಂಧಿಸಿದ ಬಳಿಕ ಆತನನ್ನು ಬುಲೆಟ್‌ಗಳು ಅಥವಾ ಕಾಡತೂಸುಗಳನ್ನು ಪತ್ತೆಹಚ್ಚುವ ಆಶಾವಾದದೊಂದಿಗೆ ಶಿಬಿರ ನಡೆದಿತ್ತೆನ್ನಲಾದ ಸ್ಥಳಕ್ಕೆ ಕೊಂಡೊಯ್ದರು ಆದರೆ ಅವರಿಗೆ ಅಲ್ಲಿ ಅಂತಹ ಯಾವುದೇ ಸಾಮಗ್ರಿ ದೊರೆಯಲಿಲ್ಲವೆಂದು ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.

ಸಂಸ್ಥಾ ಹಾಗೂ ತತ್ಸಮಾನ ಗುಂಪುಗಳಿಗೆ ಸೇರಿದ ತೀವ್ರವಾದಿ ಶಕ್ತಿಗಳು 2013ರಿಂದ 2017ರ ನಡುವೆ ನಡೆದ ಕಲಬುರ್ಗಿ, ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, ಎಡಪಂಥೀಯ ಚಿಂತಕ ಗೋವಿಂದ ಪನ್ಸಾರೆ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಶಾಮೀಲಾಗಿವೆಯೆಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News