ಹಾಮಿದ್ ಅನ್ಸಾರಿ ಇರಾನ್ ನಲ್ಲಿ ‘ರಾ’ ಕಾರ್ಯಾಚರಣೆಯನ್ನು ಬಯಲುಗೊಳಿಸಿದ್ದರು: ಮಾಜಿ ಅಧಿಕಾರಿಯ ಗಂಭೀರ ಆರೋಪ

Update: 2019-07-08 10:03 GMT

ಹೊಸದಿಲ್ಲಿ, ಜು.8: ಮಾಜಿ ರಾಜತಾಂತ್ರಿಕರೂ ಆಗಿರುವ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಇರಾನ್ ನಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಭಾರತದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಕಾರ್ಯಾಚರಣೆಯನ್ನು ಬಯಲುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಸಂಸ್ಥೆಯ ಘಟಕದ ಸದಸ್ಯರ ಜೀವಕ್ಕೆ ಅಪಾಯವೊಡಿದ್ದರೆಂದು ಮಾಜಿ ‘ರಾ’ ಅಧಿಕಾರಿ ಎನ್ ಕೆ ಸೂದ್ ಗಂಭೀರ ಆರೋಪ ಹೊರಿಸಿದ್ದಾರೆ. ಅನ್ಸಾರಿ ಅವರನ್ನು ಸತತ ಎರಡು ಅವಧಿಗಳಿಗೆ ಉಪರಾಷ್ಟ್ರಪತಿಯನ್ನಾಗಿಸಿದ್ದನ್ನೂ ಅವರು ಪ್ರಶ್ನಿಸಿದ್ದಾರೆ.

ಅನ್ಸಾರಿ ಅವರು ಇರಾನ್ ನಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆಯಲ್ಲಿದ್ದಾಗ ತಾವು ಟೆಹ್ರಾನ್ ನಲ್ಲಿ ಕರ್ತವ್ಯದಲ್ಲಿದ್ದುದಾಗಿ 2010ರಲ್ಲಿ ಸೇವೆಯಿಂದ ನಿವೃತ್ತರಾದ ಸೂದ್ ಟ್ವೀಟ್ ಒಂದರಲ್ಲಿ ಹೇಳಿದ್ದಾರೆ.

ಸೂದ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸಂಸದ ಹಾಗೂ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, “ಅನ್ಸಾರಿ ಕಮ್ಯುನಿಸ್ಟ್ ಅಭ್ಯರ್ಥಿಯಾಗಿದ್ದರು ಹಾಗೂ ಯುಪಿಎ ಅವರನ್ನು ಬೆಂಬಲಿಸಿತ್ತು” ಎಂದಿದ್ದಾರೆ.

1961ರಲ್ಲಿ ಇಂಡಿಯನ್ ಫಾರಿನ್ ಸರ್ವಿಸ್ ಸೇರಿದ್ದ ಅನ್ಸಾರಿ, ಸಂಯುಕ್ತ ಅರಬ್ ಸಂಸ್ಥಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇರಾನ್ ಹಾಗೂ ಸೌದಿ ಅರೇಬಿಯಾದಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಇರಾನ್ ನಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ ನಂತರ ಅವರು 1993ರಿಂದ 1995ರ ತನಕ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News