ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾದ ರಾಜ್ ಠಾಕ್ರೆ: ಮತಪತ್ರ ಬಳಕೆಗೆ ಆಗ್ರಹ

Update: 2019-07-08 14:45 GMT

ಹೊಸದಿಲ್ಲಿ, ಜು. 8: ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ವರಿಷ್ಠ ರಾಜ್ ಠಾಕ್ರೆ ಸೋಮವಾರ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರನ್ನು ಭೇಟಿಯಾಗಿದ್ದಾರೆ ಹಾಗೂ ರಾಜ್ಯದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯನ್ನು ಇವಿಎಂಗಳಿಗೆ ಬದಲಾಗಿ ಮತ ಪತ್ರಗಳ ಮೂಲಕ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಹಲವು ವರ್ಷಗಳ ಬಳಿಕ ದಿಲ್ಲಿಗೆ ಭೇಟಿ ನೀಡಿರುವ ಠಾಕ್ರೆ, ಸಾಂಪ್ರದಾಯಿಕ ಮತಪತ್ರದ ಮತದಾನಕ್ಕೆ ಮರಳಬೇಕು ಎಂದು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇನೆ. ಮುಖ್ಯ ಚುನಾವಣಾ ಆಯೋಕ್ತರ ಭೇಟಿ ಔಪಚಾರಿಕವಾದುದು ಎಂದು ತಿಳಿಸಿದ್ದಾರೆ. ತಾನು ಆಯ್ಕೆ ಮಾಡಿದ ಅಭ್ಯರ್ಥಿಗೆ ತಮ್ಮ ಮತ ಬಿದ್ದಿಲ್ಲ ಎಂದು ಮತದಾರರಲ್ಲಿ ಸಂಶಯ ಇದೆ. ಇಂತಹ ಸಂದರ್ಭ ಚುನಾವಣಾ ಆಯೋಗ ಮತ ಪತ್ರಕ್ಕೆ ಹಿಂದಿರುಗಬೇಕು. ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯನ್ನು ಮತ ಪತ್ರದ ಮೂಲಕ ನಡೆಸಬೇಕು. ಇವಿಎಂಗಳನ್ನು ತಿರುಚಲು ಸಾಧ್ಯ ಎಂದು ನಮಗೆ ಬಲವಾಗಿ ಅನಿಸುತ್ತಿದೆ ಎಂದು ಠಾಕ್ರೆ ಹೇಳಿದರು.

ಸುಮಾರು 220 ಲೋಕಸಭಾ ಕ್ಷೇತ್ರಗಳಲ್ಲಿ ಬಿದ್ದ ಮತಗಳ ಸಂಖ್ಯೆ ಹಾಗೂ ಲೆಕ್ಕ ಹಾಕಲಾದ ಮತಗಳ ಸಂಖ್ಯೆ ನಡುವೆ ವ್ಯತ್ಯಾಸ ಇದೆ ಎಂದು ಹೇಳುವ ಮಾಧ್ಯಮದ ವರದಿಯೊಂದನ್ನು ಠಾಕ್ರೆ ಉಲ್ಲೇಖಿಸಿದರು. ‘‘ಇದು ನಮ್ಮ ಮನಸ್ಸಿನಲ್ಲಿ ಸಂಶಯ ಮೂಡಿಸಿದೆ. ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಿಂದ ಅಂಕಿ-ಅಂಶವನ್ನು ಅಳಿಸಿದ ಬಳಿಕ ಇವಿಎಂಗಳ ವಿಶ್ವಾಸಾರ್ಹತೆ ಬಗೆಗಿನ ಅನುಮಾನ ಇನ್ನಷ್ಟು ಹೆಚ್ಚಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News