ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು ಭಾರತ, ಪಾಕ್ ವಿಫಲ: ವಿಶ್ವಸಂಸ್ಥೆ

Update: 2019-07-08 16:25 GMT

ಜಿನೇವ, ಜು. 8: ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು ಭಾರತ ಹಾಗೂ ಪಾಕಿಸ್ತಾನ ವಿಫಲವಾಗಿದೆ ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಈ ಹಿಂದಿನ ವರದಿಯಲ್ಲಿ ಎತ್ತಿದ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಾವುದೇ ದೃಢ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಕಚೇರಿ ಸೋಮವಾರ ತಿಳಿಸಿದೆ.

ಪಾಕಿಸ್ತಾನ ಹಾಗೂ ಭಾರತ ಎಸಗಿರುವ ತಪ್ಪನ್ನು ದಾಖಲಿಸಿರುವ ಹಾಗೂ ದೀರ್ಘ ಕಾಲದ ಉದ್ವಿಗ್ನತೆ ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಕಾಶ್ಮೀರ ಕುರಿತ ತನ್ನ ಮೊದಲ ವರದಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಳೆದ ವರ್ಷ ಬಿಡುಗಡೆ ಮಾಡಿದ್ದರು. ‘‘ಕಳೆದ 12 ತಿಂಗಳ ಅವಧಿಯಲ್ಲಿ ಅತ್ಯಧಿಕ ನಾಗರಿಕರ ಸಾವು ನೋವುಗಳಾದ ಬಗ್ಗೆ ವರದಿಯಾಗಿದೆ. ಇದು ಈ ದಶಕದಲ್ಲೇ ಅತ್ಯಧಿಕವಾಗಿರುವ ಸಾಧ್ಯತೆ ಇದೆ ಎಂದು 2018 ಮೇಯಿಂದ 2019ರ ಎಪ್ರಿಲ್ ವರೆಗೆ ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಪರಿಸ್ಥಿತಿಯ ಕುರಿತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವರದಿ ಹೇಳಿದೆ’’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಹೈಕಮಿಷನರ್‌ನ ಕಚೇರಿ ತಿಳಿಸಿತ್ತು.

ತಪ್ಪು ವ್ಯಾಖ್ಯಾನ: ಭಾರತ

ಜಮ್ಮು ಹಾಗೂ ಕಾಶ್ಮೀರದ ಪರಿಸ್ಥಿತಿ ಬಗ್ಗೆ ತಪ್ಪಾಗಿ ವರದಿ ನೀಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಕಚೇರಿಯನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.

ಇದು ಕೇವಲ ಈ ಹಿಂದಿನ ‘‘ತಪ್ಪು ಹಾಗೂ ಪ್ರೇರಿತ’’ ನಿರೂಪಣೆಯ ಮುಂದುವರಿದ ಭಾಗ. ಗಡಿಯಾಚೆಯಿಂದ ಪಾಕಿಸ್ಥಾನ ಮುಂದುವರಿಸಿರುವ ಭಯೋತ್ಪಾದನೆ ಕುರಿತು ಈ ವರದಿ ನಿರ್ಲಕ್ಷಿಸಿದೆ ಎಂದು ಭಾರತ ಹೇಳಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಹೈಕಮಿಷನರ್ ಕಚೇರಿ ಕಳೆದ ವರ್ಷ ಮೊದಲ ಬಾರಿಗೆ ಕಾಶ್ಮೀರದ ಕುರಿತು ವರದಿ ಬಿಡುಗಡೆ ಮಾಡಿತ್ತು.

ಈ ವರದಿಯ ಪರಿಷ್ಕರಣೆಯಲ್ಲಿ ಹೈಕಮಿಷನರ್, ‘‘ತಾನು ಎತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ಭಾರತ ಅಥವಾ ಪಾಕಿಸ್ತಾನ ಯಾವುದೇ ದೃಢ ಹೆಜ್ಜೆಗಳನ್ನು ಇರಿಸಿಲ್ಲ’’ ಎಂದು ಸೋಮವಾರ ಪ್ರತಿಪಾದಿಸಿತ್ತು. ವರದಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್, ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಹೈಕಮಿಷನರ್ ವರದಿಯ ಪರಿಷ್ಕರಣೆ ಸ್ಪಷ್ಟವಾಗಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಈ ಹಿಂದೆ ಇದ್ದ ಪರಿಸ್ಥಿತಿಯ ತಪ್ಪಾದ ಹಾಗೂ ಉದ್ದೇಶಪೂರ್ವ ವ್ಯಾಖ್ಯಾನ ಎಂದಿದ್ದಾರೆ.

ವರದಿಯ ಪ್ರತಿಪಾದನೆ ಭಾರತದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆ. ಅಲ್ಲದೆ ಪ್ರಮುಖ ಸಮಸ್ಯೆಯಾಗಿರುವ ಗಡಿಯಾಚೆಗಿನ ಭಯೋತ್ಪಾದನೆಯ ಸಂಪೂರ್ಣ ನಿರ್ಲಕ್ಷ್ಯ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News