ಸಂಘಪರಿವಾರದ ಕಾರ್ಯಕರ್ತರ ಹಲ್ಲೆ ಪ್ರಕರಣ: ದುಷ್ಕರ್ಮಿಗಳ ಬಂಧಿಸಲು ಪಿಎಫ್‌ಐ ಆಗ್ರಹ

Update: 2019-07-08 16:18 GMT

ಮಂಗಳೂರು, ಜು.8: ಮಾವಿನಹಣ್ಣು ಸಾಗಾಟದ ವಾಹನ ತಡೆದು ತಲವಾರಿನಿಂದ ಮಾರಣಾಂತಿಕ ದಾಳಿ ಮಾಡಿದ ಸಂಘಪರಿವಾರದ ಕಾರ್ಯಕರ್ತರನ್ನು ಕಾನೂನು ಕ್ರಮದಡಿಯಲ್ಲಿ ಕೂಡಲೇ ಬಂಧಿಸಬೇಕು ಎಂದು ಪಿಎಫ್‌ಐ ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಪಿಎಫ್‌ಐ ಪದಾಧಿಕಾರಿಗಳು, ತಲವಾರಿನಿಂದ ದಾಳಿ ನಡೆಸಿದ ಆರೋಪಿಗಳ ಪತ್ತೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮಾವಿನಹಣ್ಣು ವ್ಯಾಪಾರಿ ಉಳಾಯಿಬೆಟ್ಟುವಿನ ಉಮರ್ ಫಾರೂಕ್ ವಾಹನವನ್ನು ತಡೆದು ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳು ವಾಹನದಲ್ಲಿ ಏನಿದೆ? ದನ ಸಾಗಾಟ ಮಾಡಲಾಗುತ್ತಿದೆಯೇ? ಎಂದು ಉಮರ್ ಫಾರೂಕ್ ಅವರನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಉಮರ್ ಫಾರೂಕ್‌ರವರು ಮಾವಿನ ಹಣ್ಣು ಸಾಗಾಟ ಮಾಡಲಾಗುತ್ತಿದೆ ಎಂದು ಹೇಳಿದ ಸಂದರ್ಭ ಜಾತಿ ನಿಂದನೆ ಮಾಡಿ, ತಲವಾರು ಮತ್ತು ಕಬ್ಬಿನದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ವಾಹನ ಅಪಹರಿಸಿ, 70 ಸಾವಿರ ರೂ.ನ್ನು ದರೋಡೆಗೈದಿದ್ದಾರೆ. ಇದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಏನೇ ಅನಾಹುತ ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ಹೊಣೆ. ಹಲ್ಲೆ ಘಟನೆಯ ನೈಜ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು. ಬಂಧಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಪಿಎಫ್‌ಐ ಜಿಲ್ಲಾದ್ಯಂತ ಬೃಹತ್ ಪ್ರತಿಭಟಣೆ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಮನವಿ ಸಲ್ಲಿಸುವ ನಿಯೋಗದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಲಯಾಧ್ಯಕ್ಷ ಮುಝೈರ್ ಕುದ್ರೋಳಿ, ಮುನೀಬ್ ಬೆಂಗ್ರೆ, ಅಮೀರ್ ವಾಮಂಜೂರು, ಅಕ್ಬರ್ ಸಜಿಪ ಮತ್ತಿತರು ಉಪಸ್ಥಿತರಿದ್ದರು.

"ಸಂಘಪರಿವಾರಕ್ಕೆ ಅಧಿಕಾರ ಕೊಟ್ಟವರಾರು?"
ಜಾನುವಾರು ಹಾಗೂ ಇನ್ನಿತರ ಯಾವುದೇ ಸಾಗಾಟ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಲು ಸಂಘಪರಿವಾರದವರಿಗೆ ಅನುಮತಿ ಕೊಟ್ಟವರು ಯಾರು ಎಂದು ಪಿಎಫ್‌ಐ ನಿಯೋಗವು ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದೆ.
ಜಿಲ್ಲಾಡಳಿತ ಸಂಘಪರಿವಾರಕ್ಕೆ ಅನುಮತಿ ನೀಡಿದ ಬಗ್ಗೆ ಸಾರ್ವಜನಿಕ ವಲಯ ಸಂಶಯವಿದೆ. ಇಂತಹ ದುಷ್ಕೃತ್ಯ ನಡೆಸುವ ತಂಡವು ಗ್ರಾಮಾಂತರ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದೆ. ಜಿಲ್ಲೆಯಾದ್ಯಂತ ಕೋಮುಗಲಭೆ ನಡೆಸುವ ವ್ಯವಸ್ಥಿತ ಷಡ್ಯಂತರದ ಭಾಗವಾಗಿ ಸಂಘಪರಿವಾರ ಇಂತಹ ಕೃತ್ಯ ನಡೆಸುತ್ತಿದೆ ಎಂದು ಪಿಎಫ್‌ಐ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News