ಗಾಂಜಾ ಮಾರಾಟ: ಎಂಟು ಆರೋಪಿಗಳ ಬಂಧನ

Update: 2019-07-08 16:53 GMT

ಮಂಗಳೂರು, ಜು.8: ಸುರತ್ಕಲ್‌ನ ಠಾಣಾ ವ್ಯಾಪ್ತಿಯಲ್ಲಿ ಎರಡು ಹಾಗೂ ಬಂದರು ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಆರೋಪದಡಿ ಎಂಟು ಮಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಸಾಗಾಟ ಆರೋಪದಲ್ಲಿ ವಿಟ್ಲ ನಿವಾಸಿ ಮುಹಮ್ಮದ್ ಅನ್ವರ್(33) ಬೋಳಾರ ರಮೀಝ್ (29) ಬಲ್ಮಠ ಹಫೀಝ್(23), ಉಡುಪಿ ನಿವಾಸಿ ಅನ್ಸಿಯಾ (25), ಬಂದರು ನಿವಾಸಿ ರಾಝಿಕ್ (21)ಬಂಧಿತರಾದರೆ, ಗಾಂಜಾ ಸೇವನೆ ಆರೋಪದಲ್ಲಿ ಹೊಸಬೆಟ್ಟು ನಿವಾಸಿಗಳಾದ ಅರುಣ್ (20),ಉತ್ತೇಜ್(22), ದಿಶನ್(19) ಎಂಬವರನ್ನು ಬಂಧಿಸಲಾಗಿದೆ.

ಪ್ರಕರಣ 1: ರವಿವಾರ ಮಧ್ಯಾಹ್ನ 1:30ರ ವೇಳೆಗೆ ಸುರತ್ಕಲ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅನ್ವರ್, ರಮೀಝ್, ಹಝೀಝ್, ಅನ್ಸಿಯಾ ಎಂಬವರು ಗಾಂಜಾ ಸೇವನೆ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರನ್ನು ಮತ್ತಷ್ಟು ತಪಾಸಣೆ ನಡೆಸಿದಾಗ ಒಟ್ಟು 500ಗ್ರಾಂ ಗಾಂಜಾ ಪತ್ತೆಯಾಗಿದ್ದು, ಸುರತ್ಕಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗಾಂಜಾ ದಂಧೆಯ ಮಾಹಿತಿ ಪತ್ತೆ: ಬಂಧಿತ ಆರೋಪಿಗಳನ್ನು ಮತ್ತಷ್ಟು ವಿಚಾರಣೆ ನಡೆಸಿ, ಮೊಬೈಲ್ ತಪಾಸಣೆ ನಡೆಸಿದಾಗ ಗಾಂಜಾ ದಂಧೆಯ ಮಾಹಿತಿ ಲಭಿಸಿದೆ. ಈ ತಂಡಕ್ಕೆ ಬೆಂಗಳೂರಿನ ವ್ಯಕ್ತಿಯೊಬ್ಬ ಕೋಕ್, ಎಂಡಿಎಂ, ಗಾಂಜಾ ಸರಬರಾಜು ಮಾಡುತ್ತಿದ್ದು, ಆತನ ಪತ್ತೆಗೆ ಪೊಲೀಸರ ವಿಶೇಷ ತಂಡ ರಚಿಸಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ 2: ಸುರತ್ಕಲ್‌ನ ಲಾಡ್ಜ್‌ವೊಂದರಲ್ಲಿ ತಂಡವೊಂದು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಆಧಾರದಲ್ಲಿ ಸುರತ್ಕಲ್ ಪೊಲೀಸರು ದಾಳಿ ನಡೆಸಿ ಅರುಣ್, ಉತ್ತೇಜ್, ದಿಶನ್ ಎಂಬವರನ್ನು ಬಂಧಿಸಿದ್ದಾರೆ.

ಲಾಡ್ಜ್ ಪರವಾನಿಗೆ ರದ್ದು ಮಾಡಲು ಪ್ರಸ್ತಾವ: ಗಾಂಜಾ ಸೇವನೆ ಆರೋಪಿಗಳು ವಾಸ್ತವ್ಯವಿದ್ದ ಹೊಟೇಲ್ ಪರವಾನಿಗೆಯನ್ನು ರದ್ದು ಮಾಡುವಂತೆ ಪೊಲೀಸರು ಸ್ಥಳೀಯಾಡಳಿತಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ 3: ಮಂಗಳೂರು ನಗರದ ಬಂದರು ಠಾಣಾ ವ್ಯಾಪ್ತಿಯ ಮೈದಾನವೊಂದರಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಬಂದರು ನಿವಾಸಿ ರಾಝಿಕ್(21) ಬಂಧಿತ ಆರೋಪಿ. ಈತ ರಹೀಂ ಎಂಬಾತನಿಂದ ಗಾಂಜಾವನ್ನು ಖರೀದಿಸಿ ಬಂದರು ಸುತ್ತಮುತ್ತಲ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಬಂದರು ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಂಜಾ ರವಾನೆ ಆರೋಪಿಯಿಂದ 160 ಗ್ರಾಂ ಗಾಂಜಾ ಮತ್ತು ಸ್ಕೂಟರ್‌ವೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಂಗಳೂರು ಉತ್ತರ (ಬಂದರು) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News