ಉಪ್ಪಿನಂಗಡಿ: ಕಾಲೇಜುಗಳಿಗೆ ಪೊಲೀಸರ ಹಠಾತ್ ದಾಳಿ; ವಿದ್ಯಾರ್ಥಿಗಳ ಮೊಬೈಲ್ ಗಳು ವಶಕ್ಕೆ

Update: 2019-07-08 18:03 GMT

ಉಪ್ಪಿನಂಗಡಿ: ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಮೊಬೈಲ್ ದುರ್ಬಳಕೆಯ ಅವಾಂತರದ ಹಿನ್ನೆಲೆಯಲ್ಲಿ ಕಲಿಕಾ ಅವಧಿಯಲ್ಲಿ ವಿದ್ಯಾರ್ಥಿ ಸಮೂಹ ಮೊಬೈಲ್ ಬಳಕೆಯನ್ನು ಮಾಡಬಾರದೆಂಬ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಉಪ್ಪಿನಂಗಡಿ ಪೊಲೀಸರು ಮುಂದಾಗಿದ್ದು, ಸೋಮವಾರ ಕಾಲೇಜುಗಳಿಗೆ ಹಠಾತ್ ದಾಳಿ ನಡೆಸಿ 24 ಮೊಬೈಲ್‍ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.    

ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂದ ಕುಮಾರ್ ನೇತೃತ್ವದ ಪೊಲೀಸ್ ತಂಡ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿಗೆ ದಾಳಿ ನಡೆಸಿ ವಿದ್ಯಾರ್ಥಿಗಳ ಬಳಿ ಮೊಬೈಲ್‍ಗಾಗಿ ತಲಾಷೆ ನಡೆಸಿದರು. ಈ ಸಂದರ್ಭ ವಿದ್ಯಾರ್ಥಿಗಳಲ್ಲಿದ್ದ 24 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡರು. ಅಲ್ಲದೇ, ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಮುನ್ನ ಅಂಗಡಿಗಳಲ್ಲಿ ಮೊಬೈಲ್ ಇರಿಸುವ ಸುಳಿವು ಪಡೆದುಕೊಂಡ ಪೊಲೀಸರು ಶಂಕಿತ ಅಂಗಡಿಗಳಿಗೂ ದಾಳಿ ನಡೆಸಿ ತಪಾಸಣೆ ಕೈಗೊಂಡರು. 

ಭವಿಷ್ಯದೊಂದಿಗೆ ಚೆಲ್ಲಾಟ ಬೇಡ: ದಾಳಿಯ ಬಳಿಕ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಮಾತನಾಡಿದ ಎಸ್‍ಐ ನಂದಕುಮಾರ್, ಸಂಭಾವ್ಯ ಅಪಾಯದ ಅರಿವಿಲ್ಲದೆ ಮನಸ್ಸಿಗೆ ತೋಚಿದಂತೆ ಮೊಬೈಲ್‍ಗಳ ಬಳಕೆ, ಗಾಂಜಾದಂತಹ ಅಮಲು ಪದಾರ್ಥಗಳ  ಬಳಕೆಯಿಂದ ವಿದ್ಯಾರ್ಥಿಗಳ ಭವಿಷ್ಯವನ್ನೇ ನಾಶಗೊಳಿಸುತ್ತದೆ ಎಂದರಲ್ಲದೆ, ವಿದ್ಯಾರ್ಥಿಗಳನ್ನು ಸೆಳೆಯುವ ತಂಡದಿಂದ ಸಂಭವಿಸಬಹುದಾದ ಅಪಾಯ, ಅಶ್ಲೀಲ ದೃಶ್ಯಾವಳಿಗಳ ಪ್ರಸಾರದ ದುಷ್ಪರಿಣಾಮ ಮೊದಲಾದವುಗಳನ್ನು ವಿವರಿಸಿ, ಸುಂದರ ಭವಿಷ್ಯವನ್ನು ಹಾಳುಗೆಡವುವ ಯಾವುದೇ ತಪ್ಪು ಕಾರ್ಯಗಳನ್ನು ಮಾಡದಿರಿ ಎಂದು ವಿನಂತಿಸಿದರು ಹಾಗೂ ಮುಂದೆ ಮತ್ತೆ ಬಳಕೆ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  

ಪೊಲೀಸರನ್ನು ಯಾಮಾರಿಸಲು ವಿದ್ಯಾರ್ಥಿಗಳ ಯತ್ನ: ವಶ ಪಡಿಸಿಕೊಂಡ ಮೊಬೈಲ್‍ಗಳನ್ನು ಹಿಂದಿರುಗಿಸಬೇಕಾದರೆ ಹೆತ್ತವರನ್ನು ಠಾಣೆಗೆ ಕರೆದುಕೊಂಡು ಬರಬೇಕು. ಅವರ ಸಮ್ಮುಖವೇ ಮೊಬೈಲ್ ವಾಪಸ್ ನೀಡುವುದಾಗಿ ಪೊಲೀಸರು ತಿಳಿಸಿದ್ದರು. ಅದರಂತೆ ಕೆಲವೊಂದು ವಿದ್ಯಾರ್ಥಿಗಳು ಹೆತ್ತವರನ್ನು ಕರೆತಂದರೆ, ಇನ್ನು ಕೆಲವರು ದಾರಿಯಲ್ಲಿ  ಸಿಕ್ಕ  ಪರಿಚಿತರನ್ನೇ ತನ್ನ ಸಂಬಂಧಿಗರೆಂದು ಬಿಂಬಿಸಿ ಠಾಣೆಗೆ ಕರೆತಂದರು. ವಿದ್ಯಾರ್ಥಿಗಳ ಈ ತಂತ್ರವನ್ನು ಮೊದಲೇ ಅರಿತಿದ್ದ  ಪೊಲೀಸರು ತಂದೆ ಅಥವಾ ತಾಯಿ ಎಂದು ದೃಢೀಕರಿಸುವ  ದಾಖಲೆಯೊಂದಿಗೆ ಹೆತ್ತವರು ಬಾರದೇ ಹೋದರೆ ಯಾವ ಕಾರಣಕ್ಕೂ ಮೊಬೈಲ್‍ನ್ನು ಹಿಂದಿರುಗಿಸುವುದಿಲ್ಲವೆಂದು ತಾಕೀತು ಮಾಡಿರುವುದರಿಂದ ಪೊಲೀಸರನ್ನು ಯಾಮಾರಿಸಲು ಬಂದ ವಿದ್ಯಾರ್ಥಿಗಳು ನಿರಾಶೆಯಿಂದ ವಾಪಸಾಗಬೇಕಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News