ಲೋಕಸಭೆಯಲ್ಲಿ ವಿಪಕ್ಷಗಳ ನಾಯಕನ ನೇಮಕ ಕೋರಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Update: 2019-07-08 17:24 GMT

ಹೊಸದಿಲ್ಲಿ, ಜು.8: ಲೋಕಸಭೆಯಲ್ಲಿ ವಿಪಕ್ಷಗಳ ನಾಯಕನನ್ನು ನೇಮಿಸಲು ಸ್ಪೀಕರ್‌ಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಸೋಮವಾರ ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದೆ.

ಲೋಕಸಭೆಯಲ್ಲಿ ವಿಪಕ್ಷ ನಾಯಕನ ನೇಮಕದ ಕುರಿತು ಯಾವುದೇ ಕಾನೂನು ಇಲ್ಲದ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು. ಅಲ್ಲದೆ ಲೋಕಸಭೆಯಲ್ಲಿ ವಿಪಕ್ಷ ನಾಯಕನ ಆಯ್ಕೆ ಶಾಸನಬದ್ಧ ಅಗತ್ಯವೂ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾ. ಸಿ ಹರಿಶಂಕರ್ ಅವರಿದ್ದ ನ್ಯಾಯಪೀಠ ಹೇಳಿದೆ. ಇದೇ ರೀತಿಯ ಅರ್ಜಿಯನ್ನು ಹೈಕೋರ್ಟ್ 2014ರಲ್ಲೂ ತಿರಸ್ಕರಿಸಿರುವುದಾಗಿ ನ್ಯಾಯಪೀಠ ತಿಳಿಸಿದೆ.

ಲೋಕಸಭೆಯಲ್ಲಿ ವಿಪಕ್ಷ ನಾಯಕನನ್ನು ನೇಮಿಸುವ ತನ್ನ ಶಾಸನಬದ್ಧ ಕರ್ತವ್ಯವನ್ನು ಸ್ಪೀಕರ್ ನಿರ್ವಹಿಸುತ್ತಿಲ್ಲ. ಸದನದ ಸದಸ್ಯನನ್ನು ವಿಪಕ್ಷ ನಾಯಕನನ್ನಾಗಿ ಪರಿಗಣಿಸುವುದು ರಾಜಕೀಯ ಅಥವಾ ಅಂಕಗಣಿತದ ನಿರ್ಧಾರವಲ್ಲ, ಇದು ಶಾಸನಬದ್ಧ ನಿರ್ಧಾರವಾಗಿದೆ. ಈ ಹುದ್ದೆಗೆ ಹಕ್ಕು ಮಂಡಿಸುವ ಪಕ್ಷ ವಿಪಕ್ಷಗಳಲ್ಲಿ ಅತೀ ದೊಡ್ಡ ಪಕ್ಷವಾಗಿದೆಯೇ(ಸದನದಲ್ಲಿ ಹೆಚ್ಚು ಸಂಖ್ಯೆಯ ಸದಸ್ಯರನ್ನು ಹೊಂದಿರುವ) ಎಂಬುದನ್ನು ಖಾತರಿ ಪಡಿಸುವುದಷ್ಟೇ ಸ್ಪೀಕರ್ ಕೆಲಸವಾಗಿದೆ ಎಂದು ವಕೀಲರಾದ ಮನಮೋಹನ್ ಸಿಂಗ್ ನರೂಲ ಹಾಗೂ ಸುಶ್ಮಿತಾ ಕುಮಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅಲ್ಲದೆ ವಿಪಕ್ಷಗಳ ನಾಯಕನ ನೇಮಕಕ್ಕೆ ಸಂಬಂಧಿಸಿದ ನೀತಿಯನ್ನೂ ರೂಪಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು. ಪಶ್ಚಿಮ ಬಂಗಾಳದ ಸಂಸದ ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. 1977ರ ಸಂಸತ್ತು ಕಾಯ್ದೆಯ ಪ್ರಕಾರ, ಅತೀ ಹೆಚ್ಚು ಸಂಖ್ಯೆಯ ಸಂಸದ್ ಸದಸ್ಯರನ್ನು ಹೊಂದಿರುವ ವಿಪಕ್ಷದ ನಾಯಕನನ್ನು ಲೋಕಸಭೆಯಲ್ಲಿ ವಿಪಕ್ಷ ನಾಯಕ ಎಂದು ಪರಿಗಣಿಸಬಹುದು ಎಂಬ ಅಂಶವನ್ನು ಅರ್ಜಿದಾರರು ಉಲ್ಲೇಖಿಸಿದ್ದರು. ಇದರಂತೆ, ನೂತನ ಲೋಕಸಭೆಯಲ್ಲಿ 52 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅತೀ ದೊಡ್ಡ ವಿಪಕ್ಷವಾಗಿದ್ದು ವಿಪಕ್ಷ ನಾಯಕನ ಸ್ಥಾನಕ್ಕೆ ಹಕ್ಕುದಾರನಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News