×
Ad

‘ಆರ್ಟಿಕಲ್ 15’ ಸೆನ್ಸಾರ್ ಪ್ರಮಾಣಪತ್ರ ರದ್ದು ಕೋರಿ ಮನವಿ: ಸುಪ್ರೀಂ ಕೋರ್ಟ್ ನಿರಾಕರಣೆ

Update: 2019-07-08 22:59 IST

ಹೊಸದಿಲ್ಲಿ, ಜು. 8: ‘ಆರ್ಟಿಕಲ್ 15’ ಚಲನಚಿತ್ರಕ್ಕೆ ಸೆನ್ಸಾರ್ ಮಂಡಳಿ ನೀಡಿರುವ ಪ್ರಮಾಣಪತ್ರ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ ಹಾಗೂ ನಿಮ್ಮ ಸಂಕಷ್ಟಗಳೊಂದಿಗೆ ಸೂಕ್ತ ಪ್ರಾಧಿಕಾರ ಸಂಪರ್ಕಿಸಿ ಎಂದು ದೂರುದಾರರಿಗೆ ತಿಳಿಸಿದೆ.

 ‘‘ನೀವು ಕಾಯ್ದೆ ಅಡಿ ಸೂಕ್ತ ಪ್ರಾಧಿಕಾರ ಸಂಪರ್ಕಿಸಿ’’ ಎಂದು ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪೀಠ ದೂರುದಾರರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ವಕೀಲರಿಗೆ ತಿಳಿಸಿತು. ಆಯುಷ್ಮಾನ್ ಖುರಾನಾ ನಟನೆಯ ಚಿತ್ರ ‘ಆರ್ಟಿಕಲ್ 15’ ಜೂನ್ 28ರಂದು ಬೆಳ್ಳಿ ತೆರೆಗೆ ಅಪ್ಪಳಿಸಿತ್ತು. ಚಿತ್ರದ ಮೂರು ಆಕ್ಷೇಪಾರ್ಹ ಸಂಭಾಷಣೆ ಸಮಾಜದಲ್ಲಿ ವದಂತಿ ಹಬ್ಬುತ್ತಿದೆ ಹಾಗೂ ಜಾತಿ ದ್ವೇಷ ಬೆಳೆಸುತ್ತಿದೆ. ಆದುದರಿಂದ ಚಿತ್ರದ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ಕೋರಿ ದೂರುದಾರ ‘ಬ್ರಾಹ್ಮಣ್ ಸಮಾಜ್ ಆಫ್ ಇಂಡಿಯಾ’ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು.

 ತಮ್ಮ ಸಂಕಷ್ಟಗಳಿಗೆ ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಬೇಕು ಎಂದು ದೂರುದಾರರಿಗೆ ಸುಪ್ರೀಂ ಕೋರ್ಟ್ ಹೇಳಿದ ಬಳಿಕ ದೂರುದಾರ ಪರ ವಕೀಲರು ಮನವಿ ಹಿಂದೆ ತೆಗೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News